ಮಂಗಳೂರು: ಮಂಗಳೂರು ನಗರಕ್ಕೆ ಬೆಂಗಳೂರು ನಗರದಿಂದ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (MDMA) ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಆಧಾರದ ಮೇಲೆ ಫೆಬ್ರವರಿ 12, 2026ರಂದು ಉಳ್ಳಾಲ ತಾಲೂಕಿನ ತಲಪಾಡಿ ಪರಿಸರದಲ್ಲಿ ಬೂದು ಬಣ್ಣದ KA-19-MQ-3420 ಸಂಖ್ಯೆಯ ಸ್ವೀಪ್ಟ್ ಕಾರಿನಲ್ಲಿ ಎಂಡಿಎಂಎ ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.
ಬಂಧಿತರ ವಿವರಗಳು:
- ಮುಸ್ತಫಾ ಸೀದಿಯಬ್ಬ (34), ಬಸ್ತಿಪಡ್ಪು, ಉಳ್ಳಾಲ
- ಮೈಯದ್ದಿ (28), ಕೋಡಿ/ಮಾಸ್ತಿಕಟ್ಟೆ ಜಂಕ್ಷನ್, ಉಳ್ಳಾಲ
- ಮೊಹಮ್ಮದ್ ಶಿಫಾನ್ (28), ಮುಕ್ಕಚೇರಿ, ಉಳ್ಳಾಲ
ಪೊಲೀಸರು ಆರೋಪಿಗಳ ವಶದಿಂದ ರೂ. 11,90,000 ಮೌಲ್ಯದ 118.13 ಗ್ರಾಂ ಎಂಡಿಎಂಎ, ನಾಲ್ಕು ಮೊಬೈಲ್ ಫೋನ್‌ಗಳು ಹಾಗೂ ಸ್ವೀಪ್ಟ್ ಕಾರು ಸೇರಿದಂತೆ ಒಟ್ಟು ರೂ. 17,95,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಆರೋಪಿಗಳ ಪೈಕಿ ಮುಸ್ತಫಾ ಸೀದಿಯಬ್ಬ ವಿರುದ್ಧ ಈ ಹಿಂದೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನ ಪ್ರಕರಣ ದಾಖಲಾಗಿದ್ದು, ಮೈಯದ್ದಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.
ಈ ಮಾದಕ ವಸ್ತು ಮಾರಾಟ ಹಾಗೂ ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

























