ಮುಂಬೈನಲ್ಲಿ ಹಾಡುಹಗಲೇ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ‘ತ್ರಿಕೋನ ಪ್ರೇಮಕಥೆ’ಯ ಕಾರಣಕ್ಕೆ 19 ವರ್ಷದ ಯುವತಿಯೊಬ್ಬರನ್ನು ಅತ್ಯಂತ ಸಮೀಪದಿಂದ ಗುಂಡಿಕ್ಕಿ ಮುಗಿಸಲಾಗಿದೆ.
ಮುಂಬೈನ ಶಿವಾಜಿ ನಗರದ ಫುರ್ಕಾನಿಯಾ ಮಸೀದಿ ಬಳಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮೃತ ಯುವತಿಯನ್ನು ಶಿಫಾ ಶೇಖ್ (19) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಮಂಗಳವಾರ ಮಧ್ಯಾಹ್ನ ಶಿಫಾ ಶೇಖ್ ಅವರಿಗೆ ಪರಿಚಯಸ್ಥ ಮಹಿಳೆಯೊಬ್ಬರು ಫೋನ್ ಮಾಡಿ ಭೇಟಿಯಾಗಲು ಕರೆದಿದ್ದಾರೆ. ಆ ಕರೆಯನ್ನು ನಂಬಿ ಶಿಫಾ ಮನೆಯಿಂದ ಹೊರಬಂದಿದ್ದಾರೆ. ಶಿವಾಜಿ ನಗರದ ಫುರ್ಕಾನಿಯಾ ಮಸೀದಿ ಬಳಿ ಇಬ್ಬರೂ ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಮಾತಿನ ಚಕಮಕಿ ನಡೆದಿದೆ.
ಮಾತುಕತೆ ವಿಕೋಪಕ್ಕೆ ಹೋಗುತ್ತಿದ್ದಂತೆಯೇ, ಆರೋಪಿಗಳು ಶಿಫಾ ಶೇಖ್ ಮೇಲೆ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ತೀರಾ ಹತ್ತಿರದಿಂದ ಗುಂಡು ಹಾರಿಸಿದ್ದಾರೆ. ಗುಂಡು ಶಿಫಾ ಕೆನ್ನೆಯ ಮೂಲಕ ಒಳಹೋಗಿ ತಲೆಬುರುಡೆಯಲ್ಲಿ ಸಿಲುಕಿಕೊಂಡಿದೆ. ಗಂಭೀರವಾಗಿ ಗಾಯಗೊಂಡ ಶಿಫಾ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಘಾಟ್ಕೋಪರ್‌ನ ರಾಜವಾಡಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದರಾದರೂ, ಮಾರ್ಗಮಧ್ಯೆಯೇ ಶಿಫಾ ಪ್ರಾಣಬಿಟ್ಟಿದ್ದಾರೆ. ಈ ಪ್ರಕಣದಲ್ಲಿ 23 ವರ್ಷದ ವ್ಯಕ್ತಿಯ ಲಿಂಕ್ ಕೂಡ ಸಿಕ್ಕಿದೆ. ಗುಂಡು ಹಾರಿಸಿರುವ ಮಹಿಳೆ ಈ 23 ವರ್ಷದ ಹುಡುಗನ ಪ್ರೀತಿಸುತ್ತಿದ್ದಳು. ಈತ, ಮೃತ ಯುವತಿಯ ಜೊತೆಗೂ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಘಟನೆ ನಡೆದ ಕೂಡಲೇ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳೀಯರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ನಡೆದ ಕೇವಲ 12 ಗಂಟೆಯೊಳಗೆ ಪ್ರಮುಖ ಆರೋಪಿ 25 ವರ್ಷದ ಮಹಿಳೆ ಹಾಗೂ ಆಕೆಗೆ ಸಾಥ್ ನೀಡಿದ 23 ವರ್ಷದ ಯುವಕನ ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ‘ಲವ್ ಟ್ರಯಾಂಗಲ್’ ಪ್ರಕರಣ ಎಂದು ತಿಳಿದುಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.


























