ವಿಟ್ಲ: ಆಟವಾಗಿ ಆರಂಭಗೊಂಡು ಹವ್ಯಾಸವಾಗಿ, ಹವ್ಯಾಸದಿಂದ ವ್ಯಾಯಾಮವಾಗಿ, ವ್ಯಾಯಾಮದಿಂದ ಕ್ರೀಡೆಯಾಗಿ ಬೆಳೆಯುವ ಈಜು ಇಂದು ಅನೇಕ ಪ್ರತಿಭೆಗಳಿಗೆ ವೇದಿಕೆಯಾಗಿದೆ. ದೇಹದ ತಂಪು, ತಾಜಾತನ, ಏಕಾಗ್ರತೆ ಮತ್ತು ರಕ್ತಸಂಚಲನವನ್ನು ಚುರುಕುಗೊಳಿಸುವ ಈ ಕ್ರೀಡೆಯಲ್ಲಿ ವಿಟ್ಲದ ಶ್ರೀ ಲಕ್ಷ್ಮೀ ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿಟ್ಲ ಹಿತ್ಲು ಕೋಟಿಕೆರೆ ನಿವಾಸಿಗಳಾದ ದಿ| ಗೋಪಾಲ ಸಪಲ್ಯ ಮತ್ತು ಲೀಲಾವತಿ ದಂಪತಿಗಳ ತೃತೀಯ ಪುತ್ರಿಯಾಗಿರುವ ಶ್ರೀ ಲಕ್ಷ್ಮೀ ಬಾಲ್ಯದಲ್ಲೇ ಈಜಿನತ್ತ ಆಕರ್ಷಿತರಾದರು. ಮೂರೇ ವರ್ಷ ವಯಸ್ಸಿನಲ್ಲಿ ತಂದೆಯವರೇ ಮೊದಲ ಗುರುವಾಗಿ ಈಜು ಕಲಿಸಿದ್ದು ಇವರ ಜೀವನದ ಮಹತ್ವದ ತಿರುವಾಗಿದೆ. ನಂತರ ಉಮೇಶ್ ಗಾಣಿಗ (ವಿಟ್ಲ) ಮತ್ತು ತುಳಸೀ ದಾಸ್ ಶೆಣೈ ಅವರಿಂದ ತರಬೇತಿ ಪಡೆದು, ಕೇವಲ ಆರನೇ ವಯಸ್ಸಿನಲ್ಲಿ – ಮೊದಲನೇ ತರಗತಿಯಲ್ಲಿ – ಪ್ರಥಮ ಬಹುಮಾನ ಮತ್ತು ಪದಕ ಗೆದ್ದು ಗಮನ ಸೆಳೆದರು.
ಶ್ರೀ ಲಕ್ಷ್ಮೀ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲದಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಅಮೃತ ಕಾಲೇಜು ಪಡೀಲಿನಲ್ಲಿ ತೃತೀಯ ವರ್ಷದ ವಾಣಿಜ್ಯ ಪದವಿಯನ್ನು ಅಭ್ಯಾಸಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಅನೇಕ ಬಾರಿ ವಿಜೇತರಾಗಿರುವ ಹೆಮ್ಮೆ ಇವರದು.
ಒಂಬತ್ತನೇ ತರಗತಿಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸ್ಪರ್ಧಾಳುವಾಗಿ ಗುರುತಿಸಿಕೊಂಡಿದ್ದಾರೆ. ಪುತ್ತೂರು, ಮಂಗಳೂರು ಸೇರಿದಂತೆ ಹಲವು ಸಂಘಟನೆಗಳಿಂದ ಸನ್ಮಾನಿತರಾಗಿರುವ ಶ್ರೀ ಲಕ್ಷ್ಮೀ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕಾಲೇಜು ಕಾರ್ಯಕ್ರಮಗಳಲ್ಲಿಯೂ ಇವರ ಸಾಧನೆಯನ್ನು ಗುರುತಿಸಿ ಪುರಸ್ಕರಿಸಲಾಗಿದೆ.
ಬಡ ಕುಟುಂಬದ ಪ್ರತಿಭೆಯಾಗಿರುವ ಶ್ರೀ ಲಕ್ಷ್ಮೀ ತಮ್ಮ ವಿದ್ಯಾಭ್ಯಾಸದ ಜೊತೆಗೆ ಮಂಗಳೂರಿನ ಮಂಗಳಾದೇವಿ ಕ್ರೀಡಾಂಗಣದ ಈಜುಕೊಳದಲ್ಲಿ ಮಕ್ಕಳಿಗೆ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ಬಾಲವನದಲ್ಲಿ ನಡೆದ ಸ್ಪರ್ಧೆಯಲ್ಲಿ 800 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ದ್ವಿತೀಯ, 400 ಮೀ. ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಹಾಗೂ 200 ಮೀ. ವೈಯಕ್ತಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಂಗಳೂರು ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಸ್ಪರ್ಧೆಯಲ್ಲಿ ವೈಯಕ್ತಿಕ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇದುವರೆಗೆ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸುಮಾರು 70ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ಶ್ರೀ ಲಕ್ಷ್ಮೀ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸುವ ಕನಸನ್ನು ಹೊಂದಿದ್ದಾರೆ. ಸೂಕ್ತ ಬೆಂಬಲ ಮತ್ತು ಪ್ರೋತ್ಸಾಹ ದೊರೆತಲ್ಲಿ ಇನ್ನಷ್ಟು ಸಾಧನೆ ಮಾಡುವ ಸಂಕಲ್ಪ ಇವರದು.
ಶ್ರೀ ಲಕ್ಷ್ಮೀ ಅವರಂತಹ ಪ್ರತಿಭಾವಂತ ಈಜುಗಾರ್ತಿಗೆ ಇನ್ನಷ್ಟು ಅವಕಾಶಗಳು ಲಭಿಸಿ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಲಿ ಎಂಬುದು ಎಲ್ಲರ ಆಶಯವಾಗಿದೆ.


























