ಮಂಗಳೂರು: ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗಿ ನಂಬಿಸಿ ಹಣ ಪಡೆದು ವ್ಯಕ್ತಿಯೋರ್ವ ವಂಚಿಸಿರುವ ಘಟನೆ ಮಾಸುವ ಮುನ್ನವೇ ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ಮತ್ತೊಬ್ಬನ ಕಹಾನಿ ಬಯಲಾಗಿದೆ. ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು ಮಾಡಿದ್ದು, ಬಜೆಪೆ ನಿವಾಸಿ ಮನೀಶ್ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ಸಂತ್ರಸ್ತೆ ಪ್ರೀತಿಗೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಮನೀಶ್, ಬ್ಲ್ಯಾಕ್ಮೇಲ್ ಮಾಡಿ ಆಕೆಯನ್ನು ಮದುವೆ ಆಗಿದ್ದ ಎಂದು ದೂರಲಾಗಿದೆ. ಮದುವೆಗೆ ಮೂರು ದಿನ ಇರುವಾಗ ಹಣ ಇಲ್ಲ ಎಂದು ಈತ ಆತ್ಮಹತ್ಯೆ ನಾಟಕವಾಡಿದ್ದ. ಹೀಗಾಗಿ ಮದುವೆಯ ಎಲ್ಲ ಖರ್ಚನ್ನು ತಾವೇ ನೋಡಿಕೊಂಡು ಪ್ರೀತಿ ಪೋಷಕರು ವಿವಾಹ ಕಾರ್ಯ ನಡೆಸಿದ್ದರು. ಮದುವೆಯಾದ ಬಳಿಕ ಎರಡು ಲಕ್ಷ ಹಣ ಕೊಟ್ಟು ವಿದೇಶದಲ್ಲಿ ಮನೀಶ್ಗೆ ಕೆಲಸ ಕೊಡಿಸಲು ಕೂಡ ಪ್ರೀತಿ ಸಹಾಯ ಮಾಡಿದ್ದರು. ಆದ್ರೆ ದುಬೈಗೆ ಹೋದ ಈತ ಬಹರೇನ್ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿ ಶುರುಮಾಡಿದ್ದಾನೆ. ವಿಚಾರ ತಿಳಿದು ಈತನ ಇತಿಹಾಸವನ್ನು ಪ್ರೀತಿ ಕೆದಕಿದ್ದು, ಈ ವೇಳೆ ಮನೀಶ್ನ ನಿಜರೂಪ ಬಯಲಾಗಿದೆ.
ಪ್ರೀತಿ ಜೊತೆ ಮದುವೆಗೂ ಮುನ್ನ ಹಲವು ಯುವತಿಯರ ಜೊತೆ ಲವ್ ಅಫೇರ್ ಹೊಂದಿದ್ದ ಮನೀಶ್, ಅವರ ಬಳಿ ಕೂಡ ಹಣ ಪಡೆದು ಮೋಸ ಮಾಡಿದ್ದ. ಈ ವಿಚಾರವನ್ನು ಆ ಯುವತಿಯರೇ ಪ್ರೀತಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹಣ ವಾಪಾಸ್ ಕೇಳಿದ್ರೆ ಎಲ್ಲ ಯುವತಿಯರ ಬಳಿ ಒಂದೇ ನಾಟಕ ಆಡಿದ್ದ ಆರೋಪಿ, ತನಗೆ ಬ್ರೈನ್ ಟ್ಯೂಮರ್ ಇದೆ ಎಂದು ಹೇಳಿ ಹಣ ಕೊಡದೇ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದ. ಟಿಕ್ ಟಾಕ್ ಮಾಡಿ ಯುವತಿಯರಿಗೆ ಗಾಳ ಹಾಕುವ ಮನೀಶ್ ನಡೆತೆಯಿಂದ ಬೇಸತ್ತ ಪತ್ನಿ ಪ್ರೀತಿ, ಇಂತಹ ಗಂಡ ಬೇಡ. ಈತನ ನಂಬಿ ಮತ್ತೆ ಯಾರು ಮೋಸ ಹೋಗಬಾರದು ಎಂದು ಅಲವತ್ತುಕೊಂಡಿದ್ದಾರೆ.

























