ಪ್ರೇಮಿಗಳ ದಿನಾಚರಣೆ ಎಂದರೆ ಪ್ರೀತಿ, ಸಂಭ್ರಮದ ಕ್ಷಣ. ಆದರೆ ಹರಿಯಾಣದಲ್ಲಿ ಈ ಸಂಭ್ರಮದ ರಾತ್ರಿಯೇ ಭೀಕರ ಹತ್ಯೆಯೊಂದಿಗೆ ಅಂತ್ಯವಾಗಿದೆ. ವ್ಯಾಲೆಂಟೈನ್ಸ್ ಡೇ ದಿನ ಪತ್ನಿಯ ಜೊತೆ ಔತಣಕೂಟ ಮುಗಿಸಿ ಮನೆಗೆ ಬಂದ ಪತಿಯೇ, ಆಕೆಯನ್ನು ಬರ್ಬರವಾಗಿ ಮುಗಿಸಿ ದರೋಡೆಕೋರರ ಕಥೆ ಕಟ್ಟಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಹರಿಯಾಣದ ಬಹದ್ದೂರ್ಗಢದಲ್ಲಿ ನಡೆದ ಬ್ಯಾಂಕ್ ಉದ್ಯೋಗಿ ಮಹಕ್ ಅವರ ನಿಗೂಢ ಸಾವಿನ ಪ್ರಕರಣವನ್ನು ಝಜ್ಜರ್ ಪೊಲೀಸರು ಕೇವಲ 18 ಗಂಟೆಗಳಲ್ಲಿ ಭೇದಿಸಿದ್ದಾರೆ. ಮೃತಳ ಪತಿ, ಚಾರ್ಟರ್ಡ್ ಅಕೌಂಟೆಂಟ್ ಅಂಶುಲ್ ಧವನ್ ಕೊಲೆಗಾರ ಎಂದು ಸಾಬೀತಾಗಿದೆ.
ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿದ ಅಂಶುಲ್, ನಮ್ಮ ಮನೆಗೆ ನುಗ್ಗಿದ ಅಪರಿಚಿತ ದರೋಡೆಕೋರರು ನನ್ನ ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾರೆ ಎಂದು ಕಣ್ಣೀರು ಹಾಕುವ ನಾಟಕವಾಡಿದ್ದ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಆರಂಭಿಸಿದಾಗ ಅಂಶುಲ್ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದವು. ಆತ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಿಸುತ್ತಿದ್ದ. ದರೋಡೆಕೋರರ ಚಹರೆ ಬಗ್ಗೆ ಕೇಳಿದಾಗ ಉತ್ತರಿಸಲು ತಡವರಿಸುತ್ತಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ಕಠಿಣವಾಗಿ ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.
ಮೃತ ಮಹಕ್ ಗುರಗಾಂವ್ನ ಎಚ್ಡಿಎಫ್ಸಿ (HDFC) ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದರು. ಪತ್ನಿಯ ನಡತೆಯ ಬಗ್ಗೆ ಅಂಶುಲ್ ಮೊದಲಿನಿಂದಲೂ ಅನುಮಾನ ಹೊಂದಿದ್ದ. ಆಕೆಯ ಚಾರಿತ್ರ್ಯವನ್ನು ಶಂಕಿಸಿ ಆಗಾಗ ಜಗಳವಾಡುತ್ತಿದ್ದ. ವ್ಯಾಲೆಂಟೈನ್ಸ್ ಡೇ ದಿನವೂ ಇದೇ ವಿಚಾರಕ್ಕೆ ಮನಸ್ತಾಪ ಉಂಟಾಗಿ, ಪತ್ನಿಯ ಕುತ್ತಿಗೆ ಹಿಸುಕಿ, ಬಳಿಕ ಕತ್ತರಿಯಿಂದ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ.
ಕೊಲೆ ಮಾಡುವಾಗ ತನ್ನ ಬೆರಳಚ್ಚು ಸಿಗಬಾರದೆಂದು ಪತಿರಾಯ ಕೈಗೆ ಗ್ಲೌಸ್ ಧರಿಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 25 ರಂದು ಹಿಸಾರ್ ಮೂಲದ ಅಂಶುಲ್ ಮತ್ತು ಹನ್ಸಿ ಮೂಲದ ಮಹಕ್ ಮದುವೆಯಾಗಿದ್ದ. ಮದುವೆಯಾದ ಕೆಲವೇ ತಿಂಗಳಲ್ಲಿ ಈ ದಾರುಣ ಘಟನೆ ನಡೆದಿದೆ. ಮೃತಳ ತಂದೆ ಕೃಷ್ಣ ಕಥೂರಿಯಾ ಅವರು ಮೊದಲಿನಿಂದಲೂ ತಮ್ಮ ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


























