ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯುವ ವಕೀಲರು ನ್ಯಾಯಾಧೀಶರಾಗಿ ಆಯ್ಕೆಯಾಗುವುದು ಪ್ರತಿಭೆ ಮತ್ತು ಪರಿಶ್ರಮದ ಸಂಕೇತವಾಗಿದೆ. ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಮತ್ತು ಮಾನ್ಯ ಉಚ್ಚ ನ್ಯಾಯಾಲಯ 2025 ನೇ ಸಾಲಿನ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕು, ಕೇಪು ಗ್ರಾಮದ ಶಿವಪ್ಪ ಹಾಗೂ ಶಶಿಕಲಾ ರವರ ಪುತ್ರ ಶ್ರೀ ಮನೋಜ್ ಕುಮಾರ್ ಯು ರವರು ಕಿರಿಯ ವಯಸ್ಸಿನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಇವರು ಕಳೆದ 2025 ರ ಅಕ್ಟೋಬರ್ ತಿಂಗಳಿನಲ್ಲಿ ನ್ಯಾಯಾಧೀಶರ ಹುದ್ದೆಗೆ ಪ್ರಾಥಮಿಕ ಪರೀಕ್ಷೆ, ನಂತರ ಡಿಸೆಂಬರ್ ತಿಂಗಳಿನಲ್ಲಿ ಮುಖ್ಯ ಪರೀಕ್ಷೆ ಹಾಗೂ ಜನವರಿ ತಿಂಗಳಿನಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಇಲ್ಲಿ ನಡೆದ ನೇರ ಸಂದರ್ಶನದ ಮೂರು ಹಂತದ ಕಠಿಣ ಪರೀಕ್ಷೆಗಳನ್ನು ಪೂರೈಸಿ ಇದೀಗ ನ್ಯಾಯಾಧೀಶರಾಗಿ ಆಯ್ಕೆಯಾಗಿರುತ್ತಾರೆ.
ಇವರು ಕಳೆದ ಏಳು ವರ್ಷಗಳಿಂದ ಪುತ್ತೂರಿನ ಖ್ಯಾತ ವಕೀಲರಾದ ಕೆ. ನಾಗೇಶ್ ಶರ್ಮ ಇವರೊಂದಿಗೆ ಕಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ವಕೀಲರಾದ ಪ್ರಶಾಂತ್ ಪೂಜಾರಿ ರವರೊಂದಿಗೆ ಜೊತೆಗೂಡಿ ವಿಟ್ಲದಲ್ಲಿ “ಪ್ರಮಾ ಅಸೋಸಿಯೇಟ್ಸ್” ಎಂಬ ಹೆಸರಿನಲ್ಲಿ ಸ್ವಂತ ವಕೀಲರ ಕಛೇರಿ ತೆರೆದು ಕಾರ್ಯ ನಿರ್ವಹಿಸುತ್ತಿದ್ದರು.
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡಿಬಾಗಿಲು, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇಲ್ಲಿ ಹಾಗೂ ಕಾನೂನು ಪದವಿಯನ್ನು ವಿವೇಕಾನಂದ ಕಾನೂನು ಕಾಲೇಜು ಪುತ್ತೂರು ಇಲ್ಲಿ ಪಡೆದುಕೊಂಡಿರುತ್ತಾರೆ.
ಇದೀಗ ತಮ್ಮ ಕಿರಿಯ ವಯಸ್ಸಿನಲ್ಲಿ ಈ ಸಾಧನೆಯನ್ನು ಮಾಡಿ ಗ್ರಾಮೀಣ ಭಾಗದ ಮತ್ತು ಎಲ್ಲಾ ಯುವ ವಕೀಲರಿಗೆ ಮಾದರಿಯಾಗಿರುತ್ತಾರೆ.


























