ಖ್ಯಾತ ಶಿಕ್ಷಣ ತಜ್ಞ ಮತ್ತು ಲೋಕೋಪಕಾರಿ ಉದ್ಯಮಿ ಡಾ. ಸಿಎ ಎ. ರಾಘವೇಂದ್ರ ರಾವ್ (88) ನಿಧನರಾದರು.
ಎಲ್ಲರಿಗೂ ಗುಣಮಟ್ಟದ ಹಾಗೂ ಸುಸ್ಥಿರ ಶಿಕ್ಷಣವನ್ನು ನೀಡಬೇಕು ಎಂಬ ಮಹತ್ತರ ದೃಷ್ಟಿಕೋನದೊಂದಿಗೆ ಅವರು 1988ರಲ್ಲಿ ಎ ಶಾಮ ರಾವ್ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಈ ಪ್ರತಿಷ್ಠಾನದ ಅಡಿಯಲ್ಲಿ ರೂಪುಗೊಂಡ ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜುಗಳು ಇಂದು ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಗೆ ಬದ್ಧವಾಗಿರುವ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾಗಿ ಬೆಳೆದಿವೆ. ಕೇವಲ ಏಳು ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶ್ರೀನಿವಾಸ್ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, ಬಳಿಕ ಹಲವು ವೃತ್ತಿಪರ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಾಗಿ ವಿಸ್ತರಿಸಿ ರಾಜ್ಯದ ಪ್ರಮುಖ ಶಿಕ್ಷಣ ಜಾಲವಾಗಿ ರೂಪುಗೊಂಡಿತು.
ಶಿಕ್ಷಣ ಕ್ಷೇತ್ರದ ಜೊತೆಗೆ ಆತಿಥ್ಯ ವಲಯದಲ್ಲಿಯೂ ಅವರು ಗುರುತಿಸಿಕೊಂಡರು. 1980ರಲ್ಲಿ ತ್ರಿ-ಸ್ಟಾರ್ ಸಸ್ಯಾಹಾರಿ ಹೋಟೆಲ್ ‘ಶ್ರೀನಿವಾಸ್’ ಅನ್ನು ಸ್ಥಾಪಿಸಿದರು. ಬಳಿಕ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ತ್ರಿ-ಸ್ಟಾರ್ ಶುದ್ಧ ಸಸ್ಯಾಹಾರಿ ಹೋಟೆಲ್ ಎಂದು ವರ್ಗೀಕರಿಸಲ್ಪಟ್ಟ ಇದು, ಕರ್ನಾಟಕದಲ್ಲಿ ಈ ರೀತಿಯ ಮೊದಲ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಶಿಕ್ಷಣ ಹಾಗೂ ಸಮಾಜಸೇವೆಗೆ ನೀಡಿದ ಕೊಡುಗೆಗಾಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ (2004), ಶಿಕ್ಷಣ ಕ್ಷೇತ್ರದ ಚಿತ್ರಭಾರತಿ ಪ್ರಶಸ್ತಿ ಹಾಗೂ SIRC ವಜ್ರ ಮಹೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಡಾ. ರಾಘವೇಂದ್ರ ರಾವ್ ಅವರು ಪತ್ನಿ ವಿಜಯಲಕ್ಷ್ಮಿ, ಮಗಳು ಪದ್ಮಿನಿ, ಮಗ ಶ್ರೀನಿವಾಸ್ ಹಾಗೂ ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
























