ಉಪ್ಪಿನಂಗಡಿ: ಸಾರ್ವಜನಿಕರಿಂದ ಬಂದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಸಿಗರೇಟ್ ಸೇದುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಘಟನೆ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕಾಂಚನ ಮುಕ್ವೆ ಪ್ರದೇಶದಲ್ಲಿ ನಡೆದಿದೆ.
ಫೆಬ್ರವರಿ 17, 2026 ರಂದು ಸಂಜೆ ವೇಳೆಯಲ್ಲಿ, ಉಪ್ಪಿನಂಗಡಿ ಪೊಲೀಸ್ ಠಾಣೆಯ ರೌಂಡ್ಸ್ ಕರ್ತವ್ಯದಲ್ಲಿದ್ದ ಪೊಲೀಸ್ ಉಪನಿರೀಕ್ಷಕ ಸುರೇಶ್ ಸಿ.ಟಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಸಂಬಂಧಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದರು.
ವಿಚಾರಣೆ ವೇಳೆ ಆ ವ್ಯಕ್ತಿಯನ್ನು ಮಹಮ್ಮದ್ ಮೋಹಾದ್ ಎಸ್ (33), ವಿಟ್ಲ ಪಡ್ನೂರು ಗ್ರಾಮ, ಬಂಟ್ವಾಳ ತಾಲೂಕು ನಿವಾಸಿ ಎಂದು ಗುರುತಿಸಲಾಗಿದೆ. ಆತನು ತನ್ನ ಮನೆಗೆ ತೆರಳುವ ಮಾರ್ಗದಲ್ಲಿ ಸಿಗರೇಟ್ ಸೇದಿರುವುದಾಗಿ ತಿಳಿಸಿದ್ದಾನೆ.
ನಂತರ ವೈದ್ಯಕೀಯ ತಪಾಸಣೆ ನಡೆಸಿದಾಗ, ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 24/2026 ರಂತೆ NDPS ಕಾಯ್ದೆಯ ಕಲಂ 27(b) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

























