ಮಂಗಳೂರು:ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಣಂಬೂರು ಗ್ರಾಮದ ತಣ್ಣೀರುಬಾವಿ ಟ್ರೀ ಪಾರ್ಕ್ ಸಮೀಪದ ಮಂಗಳಾ ಬೋಟ್ ಯಾರ್ಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರ ನಡುವೆ ಹಣಕಾಸು ವಿಚಾರಕ್ಕೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಘಟನೆಯ ಪ್ರಕಾರ, ಕಬ್ಬಿಣದ ಕೆಲಸ ಮಾಡುತ್ತಿದ್ದ ಬಿನು ಜಿ. ಹಾಗೂ ಮರದ ಕೆಲಸ ಮಾಡುತ್ತಿದ್ದ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್ (ಪ್ರಾಯಃ 53), ಕೆಲಸ ಮುಗಿಸಿ ತಂಗಿದ್ದ ಶೆಡ್‌ನಲ್ಲಿ ಹಣಕಾಸು ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಆರೋಪಿ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್ ಕಬ್ಬಿಣದ ಉಳಿಯಿಂದ ಬಿನುವಿನ ಎದೆಯ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 102/2023ರಂತೆ ಭಾರತೀಯ ದಂಡ ಸಂಹಿತೆ (IPC) ಕಲಂ 302ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.
ನ್ಯಾಯಾಲಯದಲ್ಲಿ ಎಸ್.ಸಿ. ನಂ. 58/2024ರಂತೆ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಕಲಂ 302 ಐಪಿಸಿ ಅಡಿಯಲ್ಲಿ 5 ವರ್ಷಗಳ ಸಾದಾ ಕಾರಾವಾಸ ಶಿಕ್ಷೆ ಹಾಗೂ ಕಲಂ 304(2) ಐಪಿಸಿ ಅಡಿಯಲ್ಲಿ ರೂ.25,000 ದಂಡ ವಿಧಿಸಿ ತೀರ್ಪು ನೀಡಲಾಗಿದೆ.
ಪ್ರಕರಣದಲ್ಲಿ ಆರೋಪಿ ಸುಮಾರು 3 ವರ್ಷ 2 ತಿಂಗಳ ಕಾಲ ಜಾಮೀನು ಸಿಗದೆ ವಿಚಾರಣಾ ಬಂದಿಯಾಗಿದ್ದನು. ಇದೇ ಅವಧಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ಭಾಗಶಃ ತನಿಖೆಯನ್ನು ಆಗಿನ ಪ್ರಭಾರ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್. (ಬಜಪೆ ಠಾಣೆ) ನಡೆಸಿದ್ದು, ನಂತರ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಎಂ. ಅವರು ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದಾರೆ.


























