ಚಿಕ್ಕಮಗಳೂರು :ಕ್ರಿಶ್ಚಿಯನ್ ಬಾಲಕನೋರ್ವ, ಮುಸ್ಲಿಂ ಯುವತಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಗುಂಪೋಂದು ಅಡ್ಡಗಟ್ಟಿದೆ. ತಮ್ಮ ಸಮುದಾಯದ ಯುವತಿಯನ್ನು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದಕ್ಕೆ ಮುಸ್ಲಿಂ ಯುವಕರ ತಂಡ ಬೈಕ್ ಅಡ್ಡಗಟ್ಟಿ ಕ್ರಿಶ್ಚಿಯನ್ ಬಾಲಕನ ಮೇಲೆ ಹಲ್ಲೆ ಮಾಡಿದೆ. ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ 8 ಯುವಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಪ್ರಾಪ್ತ ಕ್ರಿಶ್ಚಿಯನ್ ಬಾಲಕ, ಮುಸ್ಲಿಂ ಯುವತಿಯನ್ನು ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಬಳಿಕ ಕ್ರಿಶ್ಚಿಯನ್ ಬಾಲಕ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಅಪ್ರಾಪ್ತ ಬಾಲಕನ ಸಹೋದರ ನೀಡಿದ ದೂರಿನನ್ವಯ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಇನ್ನು ಈ ಪ್ರಕರಣದ ಬಗ್ಗೆ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಪ್ರತಿಕ್ರಿಯಿಸಿದ್ದು, ಬಾಲಕ,ಬಾಲಕಿ ಅಪ್ರಾಪ್ತರು ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅಡ್ಡ ಹಾಕಿ ಬೆದರಿಕೆ ಹಾಕಿದ್ದಾರೆ. ಇದು ಮೇಲ್ನೋಟಕ್ಕೆ ನೈತಿಕ ಪೊಲೀಸ್ ಗಿರಿ ಎನ್ನುವುದು ಕಂಡು ಬರುತ್ತಿದೆ. ಇಬ್ಬರು ಯುವಕರು ಬಂದು ಬೈಕ್ ಅಡ್ಡ ಹಾಕಿದ್ದಾರೆ. ಇನ್ನೂ ಕೆಲವರು ಬೆದರಿಕೆ ಹಾಕಿದ್ದಾರೆ. ಅಪ್ರಾಪ್ತ ಬಾಲಕನ ಮನೆಗೆ ತೆರಳಿ ಕೆಲವರು ಹಲ್ಲೆ ಮಾಡಲು ಯತ್ನಿಸಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಇಬ್ಬರನ್ನ ಬಂಧನ ಮಾಡಲಾಗಿದ್ದು, ರಾತ್ರಿ, ಹಗಲು ಎರಡು ಪಾಳಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಂಜಾನ್ ಇರುವುದರಿಂದ ಸಂಪೂರ್ಣ ಭದ್ರತೆ ಮಾಡಲಾಗಿದೆ. ಯಾವುದೇ ನೈತಿಕ ಪೊಲೀಸ್ ಗಿರಿಗೆ ಅವಕಾಶ ನೀಡುವುದಿಲ್ಲ ಎಂದರು.

























