ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಯೋಜನಗೊಂಡಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ನಡೆಯುತ್ತಿದ್ದ ಕಟ್ಟಡದ ಮೇಲಂತಸ್ತಿನಲ್ಲಿ ಮುಳ್ಳು ಹಂದಿಯೊಂದು ಪತ್ತೆಯಾಗಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಸುರಕ್ಷಿತವಾಗಿ ಹಿಡಿಯುವ ಪ್ರಯುತ್ನದಲ್ಲಿದ್ದಾಗ ಗಾಬರಿಯಿಂದ ಓಡಿದ ಹಂದಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಫೆ.21ರಂದು ನಡೆದಿದೆ.
ನೆಹರು ನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕಟ್ಟಡದ ಮೂರನೇ ಮಹಡಿ ಮೇಲೆ ಸಾಧಾರಣ ಗಾತ್ರದ ಮುಳ್ಳುಹಂದಿಯೊಂದು ಪತ್ತೆಯಾಗಿತ್ತು.ಬೀದಿ ನಾಯಿಗಳು ಹಂದಿಯನ್ನು ಅಟ್ಟಿಸಿಕೊಂಡು ಬಂದಾಗ ಅದು ಓಡಿ ತಪ್ಪಿಸಿಕೊಳ್ಳಲು ಕಾಲೇಜಿನ ಹಿಂಭಾಗದ ಮೆಟ್ಟಿಲುಗಳಿಂದಾಗಿ ಮೇಲಕ್ಕೆ ಬಂದು ಮೂರನೇ ಅಂತಸ್ತಿನಲ್ಲಿ ಮೆಟ್ಟಿಲುಗಳಲ್ಲಿ ಇರಿಸಲಾಗಿದ್ದ ಪ್ಲಾಸ್ಟಿಕ್ ಡ್ರಮ್ ಬಳಿ ಅವಿತುಕೊಂಡು ಕುಳಿತಿತ್ತು. ಹಂದಿಯು ಮೆಟ್ಟಿಲುಗಳ ಮೂಲಕ ಮೇಲೆ ಬರುವುದನ್ನು ಉದ್ಯೋಗ ಮೇಳಕ್ಕೆ ಬಂದಿದ್ದ ಕಂಪನಿಯ ಸಿಬ್ಬಂದಿಗಳು ಗಮನಿಸಿ ಸಂಘಟಕರು ಹಾಗೂ ಕಾಲೇಜಿನ ಮುಖ್ಯಸ್ಥರಿಗೆ ಮಾಹಿತಿ ನೀಡಿದರು.
ಕಾಲೇಜಿನ ಮುಖ್ಯಸ್ಥರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಅದನ್ನು ಸುರಕ್ಷಿತವಾಗಿ ಹಿಡಿಯುವ ಪ್ರಯತ್ನ ಮಾಡಿದ್ದರು. ಆದರೆ ಅಲ್ಲಿ ನೆರೆದಿದ್ದ ಜನರನ್ನು ಕಂಡು ಗಾಬರಿಯಾಗಿ ಓಡಲು ಯತ್ನಿಸುವ ಭರದಲ್ಲಿ ಹಂದಿಯು ಕಟ್ಟಡದ ಕೊನೆ ಮಹಡಿಯ ಮೇಲ್ಬಾಗಕ್ಕೆ ಓಡಿಹೋಗಿತ್ತು.
ಅಲ್ಲಿ ಓಡುವ ಸಂದರ್ಭದಲ್ಲಿ ಸಣ್ಣ ಕಿಟಕಿಯಿಂದಾಗಿ ನುಗ್ಗಿದ ಹಂದಿ ಆಚಾನಕ್ ಆಗಿ ನಾಲ್ಕನೇ ಅಂತಸ್ತಿನಿಂದ ನೇರವಾಗಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದೆ.


























