ಸುಳ್ಯ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಾರಿನ ಗ್ಲಾಸ್ ಒಡೆದ ಘಟನೆ ಸುಳ್ಯದಲ್ಲಿ ವರದಿಯಾಗಿದೆ.
ಸುಳ್ಯ ನಿವಾಸಿ ಬಾಲಚಂದ್ರ (40) ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 20.02.2026ರಂದು ಮಧ್ಯಾಹ್ನ ವೇಳೆ ಅವರ ತಂದೆ–ತಾಯಿ ಮಾತ್ರ ಮನೆಯಲ್ಲಿ ಇದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಜಾಗದ ಗೇಟ್ ತೆರೆಯುವ ಮೂಲಕ ಬೈಕ್‌ನಲ್ಲಿ ಮನೆಗೆ ಬಂದಿದ್ದಾರೆ. ನಂತರ ಅಲ್ಲಿದ್ದ ಕಾರಿನ ಗ್ಲಾಸ್‌ಗೆ ಹೆಲ್ಮೆಟ್‌ನಿಂದ ಹೊಡೆದು ಹಾನಿಗೊಳಪಡಿಸಿದ್ದಾರೆ. ಹಾನಿಗೊಂಡ ಕಾರಿನ ಗ್ಲಾಸ್ ಮೌಲ್ಯ ಸುಮಾರು ರೂ. 5,000/- ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಾಲಚಂದ್ರ ಅವರ ತಂದೆ–ತಾಯಿ ಆರೋಪಿತನನ್ನು ಪ್ರಶ್ನಿಸಿದರೂ, ಆತನು ಯಾವುದೇ ಮಾಹಿತಿ ನೀಡದೆ ಅಲ್ಲಿಂದ ತೆರಳಿದ್ದಾನೆ. ಬಳಿಕ ಪರಿಶೀಲನೆ ನಡೆಸಿದಾಗ, ಆರೋಪಿತನು ಮೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಪ್ರೀತ್ ಎಂಬುದಾಗಿ ತಿಳಿದುಬಂದಿದೆ.
ಈ ಸಂಬಂಧ ಬಾಲಚಂದ್ರ ಅವರು 21.02.2026ರಂದು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 25/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 324(1), 329(3), 352 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

























