ಮಂಗಳೂರು, ಫೆ. 21: ಮಂಗಳೂರು ನಗರ ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ ಅಂತರ್ ರಾಜ್ಯ ಗಾಂಜಾ ಮಾರಾಟ ಜಾಲವನ್ನು ಭೇದಿಸಿ 22 ಕೆಜಿ 250 ಗ್ರಾಂ ತೂಕದ ಅಕ್ರಮ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಫೆಬ್ರವರಿ 21ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಹೊರರಾಜ್ಯದಿಂದ ಗಾಂಜಾವನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉತ್ತರ ಉಪ ವಿಭಾಗದ ಎಸಿಪಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಯಿತು. ದಾಳಿಯಲ್ಲಿ ಪಣಂಬೂರು ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಬಂಧಿತರು:
- ಕರಣ್ ಬಾಬು ರಾಮ್ ಜಾದವ್ (27), ಸಮತಾ ನಗರ, ಚೊಪ್ಪಡ ತಾಲೂಕು, ಜಲಗಾಂ ಜಿಲ್ಲೆ, ಮಹಾರಾಷ್ಟ್ರ
- ಸಮೀರ್ ಶಾ (19), ವಾರ್ಡ್-16, ತಹಶೀಲ ಬಗಳಿ, ದೇವಾಸ್ ಜಿಲ್ಲೆ, ಮಧ್ಯಪ್ರದೇಶ
- ಎಂ.ಎಚ್. ಮಯ್ಯದಿ (48), ಹೆಜಮಾಡಿ ಕೋಡಿ, ಉಡುಪಿ ಜಿಲ್ಲೆ
- ಇಬ್ರಾಹಿಂ ಕಲೀಲ್ (47), ಕುದ್ರೋಳಿ/ಕಾವೂರು, ಮಂಗಳೂರು
ಪೊಲೀಸರು ಆರೋಪಿಗಳ ವಶದಿಂದ 22.250 ಕೆಜಿ ಗಾಂಜಾ (ಅಂದಾಜು ಮೌಲ್ಯ ₹11,12,500), 6 ಮೊಬೈಲ್ ಫೋನ್‌ಗಳು (₹18,000) ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ KA-20-HE-2915 ಮತ್ತು KA-19-HP-6021 ಸಂಖ್ಯೆಯ ಸ್ಕೂಟರ್‌ಗಳನ್ನು (₹1,00,000) ವಶಪಡಿಸಿಕೊಂಡಿದ್ದಾರೆ. ಒಟ್ಟು ವಶಪಡಿಸಿಕೊಂಡ ವಸ್ತುಗಳ ಮೌಲ್ಯ ₹12,30,500 ಎಂದು ಅಂದಾಜಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕರಣ್ ಜಾದವ್ ಮತ್ತು ಸಮೀರ್ ಶಾ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಮೂಲದ ವ್ಯಕ್ತಿಗಳಿಂದ ಗಾಂಜಾ ಪಡೆದು ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯ ಎಂ.ಎಚ್. ಮಯ್ಯದಿ ಹಾಗೂ ಮಂಗಳೂರಿನ ಇಬ್ರಾಹಿಂ ಕಲೀಲ್ ಅವರಿಗೆ ತಲುಪಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಈ ಇಬ್ಬರು ಆರೋಪಿಗಳು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು ಹಾಗೂ ಮಂಗಳೂರು ನಗರದ ವಿವಿಧ ಭಾಗಗಳಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮುನ್ನವೂ ಹಲವು ಬಾರಿ ಅಕ್ರಮವಾಗಿ ಗಾಂಜಾ ತಂದು ಮಾರಾಟ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 21/2026ರಡಿ ಎನ್‌ಡಿಪಿಎಸ್ ಕಾಯ್ದೆ ಕಲಂ 8(C), 20(b)(ii)(C) ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

























