ಪುತ್ತೂರು ನಗರದ ಜನಜೀವನದಲ್ಲಿ ಹಾಸುಹೊಕ್ಕಾಗಿದ್ದ ಐತಿಹಾಸಿಕ ಸೈರನ್ ಸುಮಾರು 20 ವರ್ಷಗಳ ಮೌನದ ಬಳಿಕ ಮತ್ತೆ ಮೊಳಗಲು ಆರಂಭಿಸಿದೆ. 1971ರಲ್ಲಿ Lions Club ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದ್ದ ಈ ಸೈರನ್ ವ್ಯವಸ್ಥೆಗೆ ಇದೀಗ ಪುನಚ್ಛೇತನ ನೀಡಲಾಗಿದೆ.
ಒಂದು ಕಾಲದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸಮಯವನ್ನು ಸೂಚಿಸುತ್ತಿದ್ದ ಈ ಸೈರನ್, ಕೈಗಡಿಗಾರ ಇಲ್ಲದ ಕಾಲಘಟ್ಟದಲ್ಲಿ ಜನರಿಗೆ ಸಮಯದ ಅರಿವು ಮೂಡಿಸುತ್ತಿದ್ದ ಪ್ರಮುಖ ಸಾಧನವಾಗಿತ್ತು. ಆದರೆ ಕಾಲಕ್ರಮೇಣ ಬಳಕೆ ಕಡಿಮೆಯಾಗಿದ್ದು, ಕಳೆದ ಎರಡು ದಶಕಗಳಿಂದ ಸಂಪೂರ್ಣ ಮೌನವಾಗಿತ್ತು. ನಾದುರಸ್ಥಿಗೆ ತಲುಪಿದ್ದ ಸೈರನ್‌ಗೆ ನಗರಸಭೆ ಸುಮಾರು ರೂ. 5 ಲಕ್ಷ ವೆಚ್ಚದಲ್ಲಿ ಮರುಜೀವ ನೀಡಿದೆ.
ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಸೈರನ್‌ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹಿಂದಿನ ದಿನಗಳಲ್ಲಿ ಸೈರನ್ ಅವಲಂಬಿತ ಜನರು ಹೆಚ್ಚು ಇದ್ದರು. ಸಮಯಪಾಲನೆಗೆ ಇದು ಬಹಳ ಉಪಯುಕ್ತವಾಗಿತ್ತು. ಹಲವು ವರ್ಷಗಳಿಂದ ಪುತ್ತೂರು ಈ ವ್ಯವಸ್ಥೆಯಿಂದ ವಂಚಿತವಾಗಿದ್ದು, ಇದೀಗ ಮತ್ತೆ ಜನತೆಗೆ ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
ಇನ್ನುಮುಂದೆ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ, ಮಧ್ಯಾಹ್ನ 1 ಗಂಟೆಗೆ ಮತ್ತು ಸಂಜೆ 7 ಗಂಟೆಗೆ 15 ಸೆಕೆಂಡ್‌ಗಳ ಕಾಲ ಸೈರನ್ ಮೊಳಗಲಿದೆ. ಸಮಯ ನಿರ್ವಹಣೆಯ ದೃಷ್ಟಿಯಿಂದ ಇದು ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದು ಅವರು ತಿಳಿಸಿದರು. ಸಾರ್ವಜನಿಕರು ಮತ್ತು ಮಾಧ್ಯಮದವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ಐತಿಹಾಸಿಕ ವ್ಯವಸ್ಥೆಗೆ ಮರುಜೀವ ನೀಡಲಾಗಿದೆ ಎಂದು ಹೇಳಿದರು.
ಕಿಲ್ಲೆ ಮೈದಾನಕ್ಕೆ ಹೊನಲು ಬೆಳಕಿನ ಸೌಲಭ್ಯ
ಇದೇ ಸಂದರ್ಭದಲ್ಲಿ ಪುತ್ತೂರಿನ ಕಿಲ್ಲೆ ಮೈದಾನದ ಸುತ್ತ ಲೈಟಿಂಗ್ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ಘೋಷಿಸಲಾಯಿತು. ದಿನಪೂರ್ತಿ ಕೆಲಸ ನಿರ್ವಹಿಸುವ ಯುವಕರು ರಾತ್ರಿ 10 ಗಂಟೆಯವರೆಗೆ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಇದು ಸಹಾಯಕವಾಗಲಿದೆ ಎಂದು ಶಾಸಕ ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಸ್.ಬಿ. ಕೂಡಲಗಿ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತೆ ವಿದ್ಯಾ ಎಸ್. ಕಾಳೆ, ಮೆಸ್ಕಾಂ ಅಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

























