ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪ್ರದೇಶದ ಮಸೀದಿ ಬಳಿ ಬಾಂಬ್ ಸ್ಫೋಟ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿರುವ ಘಟನೆಗೆ ಸಂಬಂಧಿಸಿ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಪೋಸ್ಟ್ ಮಾಡಿದಾತನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
‘ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ, ಸಪೋರ್ಟ್ ಮಾಡಿ’ ಎಂದು (shankar11916) ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು.
ಈ ಕಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದೂ ಸಂಘಟನೆ ಕಾರ್ಯಕರ್ತನಾಗಿ ಗುರುತಿಸಿಕೊಂಡು ಕೊಲೆಯಾಗಿದ್ದ ಸುಹಾಸ್ ಶೆಟ್ಟಿ ಅವರ ಭಾವಚಿತ್ರ ಹೊಂದಿದ್ದ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಇದರಿಂದಾಗಿ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.
ಘಟನೆ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿರುವ ಉಳ್ಳಾಲ ಪೊಲೀಸರು, ಕಮೆಂಟ್ ಹಾಕಿದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಲು ಶೋಧ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಧಾರ್ಮಿಕ ದ್ವೇಷ ಹುಟ್ಟಿಸುವ, ಭಯ ಹುಟ್ಟಿಸುವ ರೀತಿಯ ಪೋಸ್ಟ್‌ಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.



























