ಪುತ್ತೂರು: ಮುಕ್ವೆ ಜಂಕ್ಷನ್ ಬಳಿ ತಲವಾರು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯಲ್ಲಿ ಆರೋಪಿಯಾಗಿರುವ ವ್ಯಕ್ತಿಗೆ ಸ್ಥಳೀಯರು ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಮಾರ್ಚ್ 6ರಂದು ರಾತ್ರಿ, ಪುತ್ತೂರು ತಾಲ್ಲೂಕಿನ ನರಿಮೊಗರು ನಿವಾಸಿ ಮಹಮ್ಮದ್ ಸಿರಾಜುದ್ದೀನ್ (36) ಅವರು ಮುಕ್ವೆ ಮಸೀದಿ ಸಮೀಪ ಇದ್ದಾಗ, ಅದೇ ಗ್ರಾಮದ ಅಬ್ದುಲ್ ರಹಿಮಾನ್ ಎಂಬಾತನು ಅವರ ಬಳಿಗೆ ಬಂದು, ಅದೇ ದಿನ ಸಂಜೆ ನಡೆದಿದ್ದ ಗಲಾಟೆಯೊಂದನ್ನು ಸಂಬಂಧಿಸಿ ತಕರಾರು ಮಾಡಿಕೊಂಡು ಅಲ್ಲಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆ ನಂತರ ಸಿರಾಜುದ್ದೀನ್ ಅವರು ಮನೆಗೆ ತೆರಳುವ ವೇಳೆ ಮುಕ್ವೆ ಬಳಿ ತಲುಪಿದಾಗ, ಅಬ್ದುಲ್ ರಹಿಮಾನ್ ಸಾರ್ವಜನಿಕವಾಗಿ ಭಯ ಹುಟ್ಟಿಸುವ ರೀತಿಯಲ್ಲಿ ಕೈಯಲ್ಲಿ ತಲವಾರು ಹಿಡಿದು ಯಾರನ್ನೋ ಕೊಲ್ಲುವ ಉದ್ದೇಶದಿಂದ ಪ್ರದರ್ಶಿಸುತ್ತಿರುವುದನ್ನು ಕಂಡಿದ್ದಾಗಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 29/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 109, 351 ಹಾಗೂ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 3, 25, 27 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಇದೇ ವೇಳೆ, ಘಟನೆ ನಡೆದ ಸ್ಥಳದಲ್ಲಿ ಸೇರಿದ್ದ ಸ್ಥಳೀಯರು ಆರೋಪಿಯಾಗಿರುವ ಅಬ್ದುಲ್ ರಹಿಮಾನ್ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಕುರಿತು ಅಬ್ದುಲ್ ರಹಿಮಾನ್ ನೀಡಿದ ಪ್ರತಿದೂರಿನ ಮೇರೆಗೆ, ತಾನು ಮುಕ್ವೆ ಜಂಕ್ಷನ್ ಬಳಿ ನಿಂತಿದ್ದಾಗ ಹಿಂದಿನಿಂದ ಅಪರಿಚಿತ ವ್ಯಕ್ತಿಗಳು ಪ್ರಜ್ಞೆ ತಪ್ಪುವಂತೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 30/2026 ರಂತೆ BNS 2023ರ ಕಲಂ 118(1), 126(2) ಜೊತೆಗೆ 3(5) ಅಡಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಪುತ್ತೂರು ನಗರ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

























