ಬೆಳಗಾವಿ: ಶ್ರೀಮಂತ ವ್ಯಕ್ತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಲೆಗೆ ಬೀಳಿಸಿ ಮೋಸ ಮಾಡುತ್ತಿದ್ದ ಮಹಿಳೆಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಶ್ರೀಮಂತರನ್ನೇ ಟಾರ್ಗೆಟ್ ಮಾಡಿ ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದ ಆಕೆ, ಲಾಡ್ಜ್‌ಗೆ ಕರೆಸಿ ಅವರ ಹಣ, ಚಿನ್ನ ಸೇರಿ ಅಮೂಲ್ಯ ವಸ್ತುಗಳನ್ನೆಲ್ಲಾ ದೋಚುತ್ತಿದ್ದಳು ಎಂದು ತಿಳಿದುಬಂದಿದೆ.
ಮೋಸ ಹೋಗಿದ್ದ ವ್ಯಕ್ತಿಯೊಬ್ಬರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದವಳಾದ ದೀಪಾ ಅವಟಗಿ (33) ಫ್ಯಾಶನ್ ಡಿಸೈನರ್ ಆಗಿದ್ದು, ಹನಿಟ್ರ್ಯಾಪ್ ಪ್ರಕರಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹಣದಾಸೆಗೆ ಬಿದ್ದಿದ್ದ ದೀಪಾ, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ಮೂಲಕ ಶ್ರೀಮಂತ ವ್ಯಕ್ತಿಗಳೊಂದಿಗೆ ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಅವರ ನಂಬರ್ ತೆಗೆದುಕೊಂಡು ಮೆಸೇಜ್ ಮಾಡಿ ಲಾಡ್ಜ್‌ಗೆ ಕರೆಸಿಕೊಳ್ಳುತ್ತಿದ್ದಳು. ಈಕೆಯನ್ನು ನಂಬಿ ಅಲ್ಲಿಗೆ ಬಂದ ಗಂಡಸರ ಬಳಿ ಸಲುಗೆಯಿಂದ ವರ್ತಿಸಿ, ಅವರನ್ನು ಮೊದಲು ಸ್ನಾನಕ್ಕೆ ಕಳುಹಿಸುತ್ತಿದ್ದಳು. ಇದೇ ಸಮಯ ಸಾಧಿಸಿ ವ್ಯಕ್ತಿಗಳ ಬಳಿಯಿದ್ದ ಹಣ, ಚಿನ್ನ, ಬ್ಯಾಗ್ ಹಾಗೂ ಕಾರುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಎಲ್ಲಾ ದುಷ್ಕೃತ್ಯಗಳನ್ನೆಸಗಲು ದೀಪಾಗೆ ಸಹಾಯ ಮಾಡುತ್ತಿದ್ದುದು ಆಕೆಯ ಆಪ್ತ ಸ್ನೇಹಿತ ಶಿವಾನಂದ ಮಠಪತಿ. ಶ್ರೀಮಂತ ವ್ಯಕ್ತಿಗಳ ಮಾಹಿತಿಯನ್ನು ಆಕೆಗೆ ನೀಡುತ್ತಿದ್ದವನೇ ಇವನು. ಸಧ್ಯಕ್ಕೆ ಆತನೂ ಪರಾರಿಯಾಗಿದ್ದು, ಅವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಿವಾನಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ನಿವಾಸಿ ಎಂದು ತಿಳಿದುಬಂದಿದೆ.
ಬಂಧನದ ನಂತರ ಆರೋಪಿಯಿಂದ ಸುಮಾರು 32 ಲಕ್ಷ 86 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಫಾರ್ಚೂನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್, ಒಂದು ಡೊಂಗಲ್, ಮೂರು ಕಾರಿನ ಕೀಗಳು ಹಾಗೂ 14 ಸಾವಿರ ರೂಪಾಯಿ ನಗದು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

























