ಬೆಂಗಳೂರು: ಎಸಿ ಅಳವಡಿಸುವ ಸಂದರ್ಭದಲ್ಲಿ ಬಹುಮಹಡಿ ಕಟ್ಟಡದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ 32 ವರ್ಷದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.
ಮೃತರನ್ನು ತಲಪಾಡಿ ನಿವಾಸಿಗಳಾದ ವಿಶ್ವನಾಥ್ ಹಾಗೂ ಮೀನಾಕ್ಷಿ ದಂಪತಿಯ ಪುತ್ರ ಹರ್ಷಿತ್ ಪೂಜಾರಿ ಎಂದು ಗುರುತಿಸಲಾಗಿದೆ.
ಹರ್ಷಿತ್ ಕಳೆದ ಮೂರು ವರ್ಷಗಳಿಂದ ವಿದೇಶದಲ್ಲಿ ಹಡಗು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮೂರು ತಿಂಗಳಿಗೊಮ್ಮೆ ರಜೆಗೆ ಮನೆಗೆ ಬರುವಾಗ ತಮ್ಮ ಮೂಲ ವೃತ್ತಿಯಾದ ಎಸಿ ಮೆಕ್ಯಾನಿಕ್ ಕೆಲಸವನ್ನೂ ಮಾಡುತ್ತಿದ್ದರು.
ಇತ್ತೀಚೆಗೆ ಸಂಬಂಧಿಕರೊಬ್ಬರಿಗೆ ಎಸಿ ಮೆಕ್ಯಾನಿಸಂ ತರಬೇತಿ ನೀಡುವ ಉದ್ದೇಶದಿಂದ ಅವರು ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ನಗರದ ಬಹುಮಹಡಿ ಕಟ್ಟಡವೊಂದರಲ್ಲಿ ಎಸಿ ಯುನಿಟ್ ಅಳವಡಿಸುವಾಗ ಅವರು ಆಕಸ್ಮಿಕವಾಗಿ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರು ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿಸಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಮಾರ್ಚ್ 7 ರಂದು ಅವರನ್ನು ಬೆಂಗಳೂರಿನಿಂದ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿತ್ತು. ಆದರೆ ಮಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಹರ್ಷಿತ್ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿತು. ಅವರು ತಂದೆ-ತಾಯಿ, ಪತ್ನಿ, ಒಬ್ಬ ಸಹೋದರ ಹಾಗೂ ಎರಡು ವರ್ಷದ ಪುತ್ರಿಯನ್ನು ಅಗಲಿದ್ದಾರೆ.

























