ಒಂದು ವಾರದ ಹಿಂದೆ ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 19 ವರ್ಷದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಹೆರ್ಗ ಶೆಟ್ಟಿಬೆಟ್ಟು ನಿವಾಸಿ ಮೊಹಮ್ಮದ್ ಝಾದ್ (19) ಎಂದು ಗುರುತಿಸಲಾಗಿದೆ. ಸಂತೆಕಟ್ಟೆಯ ಲಕ್ಷ್ಮಿನಗರ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿತ್ತು. ಅಪಘಾತದ ನಂತರ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ಎಲ್ಲಾ ಪ್ರಯತ್ನಗಳ ನಡುವೆಯೂ ಮಂಗಳವಾರ, ಮಾರ್ಚ್ 10ರಂದು ಅವರು ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗೆ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದ ಝಾದ್ ಉದ್ಯೋಗಕ್ಕಾಗಿ ಗಲ್ಫ್ ದೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಅವರು ತಂದೆ–ತಾಯಿ ಹಾಗೂ ಒಬ್ಬ ಸಹೋದರರನ್ನು ಅಗಲಿದ್ದಾರೆ.

























