ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಸುರತ್ಕಲ್ ಠಾಣಾ ಪೊಲೀಸರು ವಾಹನಗಳ ಬಿಡಿಭಾಗಗಳನ್ನು ಕಳವುಗೈದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ವಿವರ:
ಫೆಬ್ರವರಿ 14/15, 2026 ರಂದು ರಾತ್ರಿ ವೇಳೆ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿಯ ಬಳಿಯ ಫ್ರೆಂಡ್ಸ್ ಗ್ಯಾರೇಜ್ ಬಳಿ ಲಾರಿಯನ್ನು ಪಾರ್ಕ್ ಮಾಡಿದ ಚಾಲಕನೊಬ್ಬನು, ಗ್ಯಾರೇಜ್ನಲ್ಲಿ ದುರಸ್ತಿ ಕಾರ್ಯಕ್ಕಾಗಿ ನಿಲ್ಲಿಸಿದ್ದ ಎರಡು ಘನ ವಾಹನಗಳ ಬಿಡಿಭಾಗಗಳನ್ನು ಕಳವು ಮಾಡಿ ಲಾರಿಯಲ್ಲಿ ಸಾಗಿಸಿದ್ದಾನೆ. ಈ ಕುರಿತು ಗ್ಯಾರೇಜ್ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಆರೋಪಿಯಾದ ಮುಖೇಶ್ ದಾಸ್ (46) ಎಂಬ ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಆರೋಪಿ ಮೂಲತಃ ರಾಜಸ್ಥಾನದ ಜೋಧಪುರ ಜಿಲ್ಲೆಯ ನಿವಾಸಿಯಾಗಿದ್ದು, ಬೆಂಗಳೂರಿನ ಬನಶಂಕರಿಯ ಶ್ರೀನಿವಾಸನಗರದಲ್ಲಿ ವಾಸಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ಆರೋಪಿಯ ವಶದಿಂದ ಸುಮಾರು ₹96,000 ಮೌಲ್ಯದ ವಾಹನ ಬಿಡಿಭಾಗಗಳು ಹಾಗೂ ಕೃತ್ಯಕ್ಕೆ ಬಳಸಿದ KA-02-AM-2335 ಸಂಖ್ಯೆಯ ಈಚರ್ ಲಾರಿ ಸೇರಿ ಒಟ್ಟು ₹15,96,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.


























