ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಕರೆತಂದ ಪ್ರಿಯಕರನೇ, ಮದುವೆಯ ವಿಚಾರಕ್ಕೆ ಶುರುವಾದ ಜಗಳದ ಹಿನ್ನೆಲೆಯಲ್ಲಿ ಪ್ರಿಯತಮೆಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಡತಿ ಬಳಿ ನಡೆದಿದೆ. ಕೊಡಗು ಮೂಲದ ರಂಜಿತಾ (24) ಮೃತಪಟ್ಟ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ರಂಜಿತಾ ಮತ್ತು ಆರೋಪಿ ಅಯ್ಯಪ್ಪ ಇಬ್ಬರೂ ಕೊಡಗಿನ ಪೊನ್ನಂಪೇಟೆ ಮೂಲದವರು. ಅಯ್ಯಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿಯನ್ನು ಬಿಟ್ಟಿದ್ದ. ತನ್ನ ಊರಿನ ಪಕ್ಕದವಳೇ ಆದ ರಂಜಿತಾಳನ್ನು ಪ್ರೀತಿಸುತ್ತಿದ್ದ ಈತ, ಅವಳನ್ನೇ ಮದುವೆಯಾಗುವುದಾಗಿ ನಂಬಿಸಿದ್ದ. ಆತನ ಮಾತು ನಂಬಿದ ರಂಜಿತಾ ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದಳು.
ಇಬ್ಬರೂ ಕೊಡತಿ ಬಳಿಯ ಗೋಪಾಲ್ ಎಂಬುವವರ ಮನೆಯಲ್ಲಿ ಕಳೆದ ಎರಡು ತಿಂಗಳಿನಿಂದ ವಾಸವಿದ್ದರು. ರಂಜಿತಾ ಡಿ-ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಅಯ್ಯಪ್ಪ ಡ್ರೈ ಫ್ರೂಟ್ಸ್ ಅಂಗಡಿಯಲ್ಲಿ ಸೂಪರ್‌ವೈಸರ್ ಆಗಿದ್ದ. ಆದರೆ, ಮೊದಲ ಪತ್ನಿಗೆ ವಿಚ್ಛೇದನ ನೀಡದೆ ತನ್ನನ್ನು ಮದುವೆಯಾಗುವಂತೆ ರಂಜಿತಾ ಒತ್ತಾಯಿಸುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ನಿರಂತರ ಜಗಳ ನಡೆಯುತ್ತಿತ್ತು.ಶುಕ್ರವಾರ ಮಧ್ಯರಾತ್ರಿ ಜಗಳ ವಿಕೋಪಕ್ಕೆ ತಿರುಗಿದಾಗ, ಆರೋಪಿ ಅಯ್ಯಪ್ಪ ವೈಯರ್‌ನಿಂದ ರಂಜಿತಾಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಆರೋಪಿ ಅಯ್ಯಪ್ಪ, ಇದೊಂದು ಆತ್ಮಹತ್ಯೆ ಎಂದು ಬಿಂಬಿಸಲು ಹವಣಿಸಿದ್ದ. ರಂಜಿತಾ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾಳೆ ಎಂದು ನಂಬಿಸಲು ದೃಶ್ಯ ಸೃಷ್ಟಿಸಿದ್ದ. ಬಳಿಕ ಮನೆ ಮಾಲೀಕ ಗೋಪಾಲ್ ಅವರ ಬಳಿ ಹೋಗಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿ ಆಸ್ಪತ್ರೆಗೆ ಕರೆದೊಯ್ದಿದ್ದ.ಸ್ಥಳಕ್ಕೆ ಭೇಟಿ ನೀಡಿದ ವರ್ತೂರು ಪೊಲೀಸರು ಪರಿಶೀಲನೆ ನಡೆಸಿದಾಗ ಅಯ್ಯಪ್ಪನ ನಾಟಕ ಬಯಲಾಗಿದೆ. ಕುತ್ತಿಗೆಯ ಮೇಲಿದ್ದ ಗುರುತುಗಳು ಮತ್ತು ಮನೆಯಲ್ಲಿದ್ದ ಸಾಕ್ಷ್ಯಗಳು ಇದು ನೇಣು ಬಿಗಿದುಕೊಂಡಿದ್ದಲ್ಲ, ಬದಲಾಗಿ ಕೊಲೆ ಎಂಬುವುದನ್ನು ಪುಷ್ಟೀಕರಿಸಿವೆ. ತೀವ್ರ ವಿಚಾರಣೆ ನಡೆಸಿದಾಗ ಅಯ್ಯಪ್ಪ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

























