ಮಂಗಳೂರು: ಕೆಲಸಕ್ಕೆಂದು ಮಹಿಳೆಯೊಬ್ಬರನ್ನು ಕರೆದುಕೊಂಡು ಬಂದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಲಾಲ್ ಬಾಗ್ ಬಳಿ ಶುಕ್ರವಾರ ನಡೆದಿದೆ.
ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಬೆಳಗ್ಗೆ ವೇಳೆಗೆ ಉರ್ವಸ್ಟೋರ್ ಜಂಕ್ಷನ್ ನಲ್ಲಿ ಕೂಲಿ ಕೆಲಸಕ್ಕೆಂದು ನಿಂತಿದ್ದ ಹೊರ ಜಿಲ್ಲೆಯ ಸುಮಾರು 35 ವರ್ಷದ ಮಹಿಳೆಯನ್ನು ಕೆಲಸ ಇದೆ ಎಂದು ನಂಬಿಸಿದ್ದಾನೆ. ಬಳಿಕ ಬಸ್ಸಿನಲ್ಲಿ ಲಾಲ್ ಬಾಗ್ ಗೆ ಕರೆದುಕೊಂಡು ಬಂದಿದ್ದಾನೆ.
ಲಾಲ್ ಬಾಗ್ ಪಂಪ್ ಹೌಸ್ ಬಳಿಯ ಜನ ವಾಸವಿಲ್ಲದ ಹಳೆಯ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಬೊಬ್ಬೆ ಹಾಕಿದಾಗ ಸ್ಥಳೀಯರು ಒಟ್ಟಾಗಿದ್ದು, ಈ ವೇಳೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಮಹಿಳೆಯ ಕೈಗೆ ಗಾಯವಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

























