ಬಂಟ್ವಾಳ: ಸರಪಾಡಿಯಲ್ಲಿ ನೇತ್ರಾವತಿ ನದಿಗೆ ಹಾರಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಶನಿವಾರ ನದಿಯಲ್ಲಿ ಪತ್ತೆಯಾಗಿದೆ.
ಸರಪಾಡಿಯ ಹೋಟೇಲೊಂದರಲ್ಲಿ ತಿಂಡಿ ತಿಂದು ಬಳಿಕ ನದಿಯ ಬಳಿಗೆ ಆಗಮಿಸಿದ ಆತ ಮನೆಯಿಂದ ಒಂದು ಜತೆ ಹೆಚ್ಚುವರಿ ಬಟ್ಟೆಯನ್ನು ತಂದು ನದಿಯ ಮೆಟ್ಟಿಲುಗಳ ಬಳಿ ಚಪ್ಪಲಿಯ ಜತೆಗಿಟ್ಟು ನದಿಗೆ ಹಾರಿದ್ದಾನೆ.
ಸ್ಥಳೀಯರು ಯಾರದ್ದೋ ಬಟ್ಟೆಯನ್ನು ನದಿಯ ಕಿನಾರೆಯಲ್ಲಿ ಕಂಡು ಯಾರೋ ನದಿಗೆ ಬಿದ್ದಿರಬಹುದೆಂದು ಸಂಶಯದಿಂದ ಹುಡುಕಾಡಿದರೂ ಆತನ ಸುಳಿವು ಪತ್ತೆಯಾಗಿರಲಿಲ್ಲ.
ಶನಿವಾರ ಬೆಳಗ್ಗೆ ದೋಣಿ ನಾವಿಕ ಇಸಾಕ್ ಅವರಿಗೆ ನದಿಯಲ್ಲಿ ಆತನ ಮೃತದೇಹ ಪತ್ತೆಯಾಗಿದ್ದು, ಅವರು ನದಿ ಕಿನಾರೆಗೆ ಎಳೆದುಕೊಂಡು ಬಂದು ಸಂಬಂಧಪಟ್ಟವರಿಗೆ ವಿಚಾರವನ್ನು ತಿಳಿಸಿದ್ದಾರೆ.
ಆತ ಮೂಲತಃ ವಗ್ಗ ಸಮೀಪದ ಕಾಡಬೆಟ್ಟಿನವನಾದರೂ, ಆತನ ಪತ್ನಿಯ ಮನೆ ಸರಪಾಡಿ ಸಮೀಪದ ಮಣಿನಾಲ್ಕೂರು ಗ್ರಾಮದ ಅಗರಗಂಡಿಯಲ್ಲಿದೆ.
ಹೆಚ್ಚಾಗಿ ಪತ್ನಿಯ ಮನೆಯಲ್ಲೆ ಇರುತ್ತಿದ್ದ ಆತ ಸ್ಥಳೀಯವಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದನು ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಗ್ಗ ಸಮೀಪದ ಕಾಡಬೆಟ್ಟು ನಿವಾಸಿ ಯಶೋಧರ(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಆತ ಮಾ. 13ರಂದು ಬೆಳಗ್ಗೆ 6 ಸುಮಾರಿಗೆ ಮನೆಯಿಂದ ಕೆಲಸಕ್ಕೆಂದು ಬಂದಿದ್ದು, ಸರಪಾಡಿ ಬೀದಿಗೆ ಆಗಮಿಸಿ ಬಳಿಕ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
























