ಉಪ್ಪಿನಂಗಡಿ ಸಮೀಪದ ಕಲ್ಲೇರಿ ಪ್ರದೇಶದಲ್ಲಿ ಸೋಮವಾರ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ 5 ವರ್ಷದ ಬಾಲಕಿ ಸಾವನ್ನಪ್ಪಿ, ಇನ್ನಿಬ್ಬರು ಗಾಯಗೊಂಡಿದ್ದಾರೆ.
ತಣ್ಣಿರುಪಂತ ಗ್ರಾಮದ ಕೊಡಂಗೆ ಮನೆ ನಿವಾಸಿ ಇಸ್ಮಾಯಿಲ್ (60) ಅವರು ತಮ್ಮ ಮಗಳು ಸಾಜಿರಾ (33) ಹಾಗೂ ಮೊಮ್ಮಗಳು ಸುಹೈರಾ ಅವರನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಕಲ್ಲೇರಿಯಿಂದ ಕುಪ್ಪೆಟ್ಟಿಗೆ ತೆರಳುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರನ್ನು ವೇಣೂರು ಮೂಲದ ಶಿವಪ್ರಸಾದ್ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅಪಘಾತದ ಪರಿಣಾಮ ಸುಹೈರಾ, ಸಾಜಿರಾ ಹಾಗೂ ಇಸ್ಮಾಯಿಲ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸುಹೈರಾ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
























