ಪುತ್ತೂರು: ಜಮೀನು ವಿಚಾರದ ತಕರಾರು ಹಿನ್ನೆಲೆ ಅಣ್ಣನೇ ತಂಗಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಉರುವದಲ್ಲಿ ನಡೆದಿದೆ.
ಪುತ್ತೂರು ನಿವಾಸಿ ಮಮ್ತಾಜ್ (32) ನೀಡಿದ ದೂರಿನ ಪ್ರಕಾರ, ಅವರ ತಂದೆ ಹಾಗೂ ಅಣ್ಣ ಕಲಂದರ್ ಶಾಫಿ ನಡುವೆ ಜಮೀನು ವಿಚಾರದಲ್ಲಿ ವಿವಾದವಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಚ್ 15ರಂದು ಬೆಳಿಗ್ಗೆ, ಮಮ್ತಾಜ್ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಕಲಂದರ್ ಶಾಫಿ ಕತ್ತಿಯೊಂದಿಗೆ ಮನೆಗೆ ಬಂದು ಅವ್ಯಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಹಲ್ಲೆಯಿಂದ ಮಮ್ತಾಜ್ ಅವರ ಕೈಗೆ ಗಾಯವಾಗಿದ್ದು, ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 352, 351(3), 118(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

























