ರಾಮಕುಂಜ: ತಲೆನೋವಿಗೆಂದು ಮನೆಯಲ್ಲಿದ್ದ ಔಷಧಿ ಸೇವಿಸಿ ಅಸ್ವಸ್ಥಗೊಂಡು ಬಾಲಕ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ಮಾ.18ರಂದು ರಾತ್ರಿ ನಡೆದಿದೆ.
ರಾಮಕುಂಜ ಗ್ರಾಮದ ಕೊಂಡ್ಯಾಡಿ ನಿವಾಸಿ, ರಿಕ್ಷಾ ಚಾಲಕ ಸಂಜೀವ ಪೂಜಾರಿಯವರ ಪುತ್ರ, ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಚಿರಾಗ್ (10) ಮೃತಪಟ್ಟ ದುರ್ದೈವಿ ಬಾಲಕ, ಚಿರಾಗ್‌ಗೆ ಪದೇ ಪದೇ ತಲೆನೋವು ಬರುತ್ತಿದ್ದು ಮಾ.18ರಂದು ಸಂಜೆ ಬಾಲಕ ತಲೆನೋವಿಗೆಂದು ಮನೆಯಲ್ಲಿದ್ದ ಔಷಧಿ(ಸಿರಾಫ್)ಯನ್ನು ಸೇವಿಸಿ ಅಸ್ವಸ್ಥಗೊಂಡು ಹೊರಳಾಡುತ್ತಿದ್ದರೆನ್ನಲಾಗಿದೆ. ಈ ವಿಚಾರ ತಿಳಿದ ಬಾಲಕನ ತಾಯಿ ಕೂಡಲೇ ಗಂಡನಿಗೆ ವಿಷಯ ತಿಳಿಸಿದ್ದು ಅವರು ಮನೆಗೆ ಬಂದು ಮಗನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಬಾಲಕ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಸಂಜೀವ ಪೂಜಾರಿ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮಾ.19ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿರಾಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕೊಂಡ್ಯಾಡಿಯ ಮನೆಗೆ ತರಲಾಯಿತು.
ಮೃತ ಬಾಲಕ ಚಿರಾಗ್ ಮನೆಗೆ ಸುಳ್ಯ ಶಾಸತಿ ಭಾಗೀರಥಿ ಮುರುಳ್ಯ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಸುಳ್ಯ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ, ಪಕ್ಷದ ಪ್ರಮುಖರಾದ ಲಕ್ಷ್ಮೀನಾರಾಯಣ ರಾವ್, ಪ್ರಶಾಂತ್ ಆರ್. ಕೆ.ಮತ್ತಿತರರು ಮಾ.20ರಂದು ಭೇಟಿ ನೀಡಿ ತಂದೆ, ತಾಯಿಗೆ ಸಾಂತ್ವನ ಹೇಳಿದ್ದಾರೆ.


























