ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೊಗೋಡಿ ಪ್ರದೇಶದಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿಯಲ್ಲಿ ಹಲ್ಲೆ ಹಾಗೂ ಸೊತ್ತುಗಳಿಗೆ ಹಾನಿ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಈ ಕುರಿತು ಗ್ಯಾಸ್ ಪಂಪ್ ಮ್ಯಾನೇಜರ್ ಕುನಲ್ ಭುಹ್ನಿಯಾ (27) ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಮಾರ್ಚ್ 20ರಂದು ಸಂಜೆ ಕೆಎ 19 ಎಸಿ 2102 ಸಂಖ್ಯೆಯ ಆಟೋರಿಕ್ಷಾವನ್ನು ಅದರ ಚಾಲಕನು ಪಂಪ್ ಒಳಗೆ ಚಲಾಯಿಸಿಕೊಂಡು ಬಂದು, ಕಚೇರಿ ಸಿಬ್ಬಂದಿ ಅಶ್ವಿನ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ.
ಇದಾದ ಬಳಿಕ ಆರೋಪಿ ಹೊರಬಂದು ಗ್ಯಾಸ್ ಪಂಪ್‌ನ ಸೊತ್ತುಗಳಿಗೆ ಹಾನಿ ಮಾಡಿದ್ದು, ಸುಮಾರು ರೂ. 48,000 ಮೌಲ್ಯದ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ಸಂಖ್ಯೆ 36/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 115(2), 287, 324(4), 351(2) ಮತ್ತು 352 ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


























