ಸುಳ್ಯ : ಇಂದು ಬೆಳಿಗ್ಗೆ ಕಲ್ಮಕಾರಿನಲ್ಲಿ ಮೊಬೈಲ್ ಬ್ಯಾಟರಿ ಸ್ಪೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರಿಗೆ ಗಾಯಗಳಾದ ಘಟನೆ ವರದಿಯಾಗಿದೆ.
ಗುರುಪ್ರಸಾದ್ ನಿಡುಬೆ ಎಂಬವರು ತಮ್ಮ ವಿವೋ ವೈ 100 ಎ ಮೊಬೈಲ್ ಅನ್ನು ಪ್ಯಾಂಟ್‌ನ ಕಿಸೆಯಲ್ಲಿ ಇಟ್ಟುಕೊಂಡಿದ್ದರು. ಈ ವೇಳೆ ಏಕಾಏಕಿ ಮೊಬೈಲ್ ಸ್ಪೋಟಗೊಂಡು ಅವರ ಕಾಲಿನ ತೊಡೆ ಭಾಗಕ್ಕೆ ಗಾಯಗಳಾಗಿದೆ.
ಸ್ಪೋಟದ ಪರಿಣಾಮವಾಗಿ ಬೆಂಕಿ ಕಾಣಿಸಿಕೊಳ್ಳದಿದ್ದರೂ, ಮೊಬೈಲ್ ಬ್ಯಾಟರಿ ಭಾಗ ಸಂಪೂರ್ಣ ಕಪ್ಪಾಗಿದ್ದು, ದೊಡ್ಡ ಶಬ್ದದೊಂದಿಗೆ ಹೊಗೆ ಹೊರಬಂದಿದೆ. ಮೊಬೈಲ್ ಇದ್ದ ಜಾಗದಲ್ಲಿ ಚರ್ಮ ಸುಟ್ಟು ಗಾಯವಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ಗುರುಪ್ರಸಾದ್ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.


























