ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ವ್ಯಕ್ತಿ ವರದಕ್ಷಿಣೆಗಾಗಿ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ರೇಡಿಯಾಲಜಿಸ್ಟ್ ಆಗಿರುವ ಅರುಣ್ ಶರ್ಮಾ ಮತ್ತು ನರ್ಸ್ ಆಗಿರುವ ಕಾಜಲ್ ಗುರುಗ್ರಾಮ್‌ನ ನರ್ಸಿಂಗ್ ಹೋಂನಲ್ಲಿ ಸಹೋದ್ಯೋಗಿಗಳಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ದೀರ್ಘಕಾಲ ಒಟ್ಟಿಗೆ ಕೆಲಸ ಮಾಡಿದ ಅವರ ಬಾಂಧವ್ಯ ಸ್ನೇಹವಾಗಿ ಬದಲಾಗಿತ್ತು ಮತ್ತು ಅವರಿಗೆ ತಿಳಿಯದೇ ಪ್ರೀತಿಯಲ್ಲಿ ಬಿದ್ದಿದ್ದರು.
ಅವರು ಒಂದು ಹೆಜ್ಜೆ ಮುಂದಿಟ್ಟು ಕಳೆದ ನವೆಂಬರ್‌ನಲ್ಲಿ ವಿವಾಹವಾದರು, ಒಟ್ಟಿಗೆ ಅವರ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು. ಆದರೆ, ಆ ಸಂಬಂಧವು ನಾಲ್ಕು ತಿಂಗಳೊಳಗೆ ದುರಂತ ಅಂತ್ಯಗೊಂಡಿತು, ಅರುಣ್ ವರದಕ್ಷಿಣೆಗಾಗಿ ಆಕೆಯ ಕೊಲೆಯನ್ನೇ ಮಾಡಿದ್ದಾನೆ.
ಮದುವೆಯಾದ ಕೂಡಲೇ, ಅರುಣ್ ತನ್ನ ಹೆಂಡತಿಯ ಮೇಲೆ ಕ್ಷುಲ್ಲಕ ವಿಷಯಗಳಿಗೆ ದೈಹಿಕವಾಗಿ ಹಲ್ಲೆ ಮಾಡಲು ಶುರುಮಾಡಿದ್ದ ಎಂದು ಕಾಜಲ್ ಸಹೋದರ ಹೇಳಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಮತ್ತು ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಮಾರ್ಚ್ 4ರಂದು ಹೋಳಿ ಹಬ್ಬದ ಪ್ರಯುಕ್ತ ಈ ದಂಪತಿ ಗುರುಗ್ರಾಮದ ಗಡಿ ಹರ್ಸಾರು ಎಂಬಲ್ಲಿರುವ ಕಾಜಲ್ ಅವರ ತವರು ಮನೆಗೆ ಬಂದಿದ್ದರು.ಮಾರ್ಚ್ 17ರಂದು ರಾತ್ರಿ ಮದ್ಯದ ಅಮಲಿನಲ್ಲಿದ್ದ ಅರುಣ್, ಕಾಜಲ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದ. ಮರುದಿನ ಮುಂಜಾನೆ ಇಬ್ಬರ ನಡುವೆ ಮತ್ತೆ ಜಗಳ ನಡೆದಿದೆ. ಈ ವೇಳೆ ಅರುಣ್ ತನ್ನ ವೈದ್ಯಕೀಯ ಜ್ಞಾನವನ್ನು ಕೆಟ್ಟದಾಗಿ ಬಳಸಿ ಕಾಜಲ್‌ಗೆ ವಿಷದ ಇಂಜೆಕ್ಷನ್ ನೀಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಕಾಜಲ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆಯ ಮೂಗಿನಿಂದ ರಕ್ತ ಬರಲಾರಂಭಿಸಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲೇ ಕಾಜಲ್ ಮೃತಪಟ್ಟಿದ್ದರು.
ಘಟನಾ ಸ್ಥಳದ ಶೌಚಾಲಯದಲ್ಲಿ ಸಿರಿಂಜ್ ಪತ್ತೆಯಾಗಿದ್ದು, ಕುಟುಂಬಸ್ಥರಿಗೆ ಅನುಮಾನ ಮೂಡಿಸಿತ್ತು. ಕೂಡಲೇ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಸೆಕ್ಟರ್ 10 ಪೊಲೀಸರು ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಅರುಣ್ ಶರ್ಮಾನನ್ನು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಅರುಣ್, ತಾನೇ ವಿಷದ ಇಂಜೆಕ್ಷನ್ ನೀಡಿರೋದಾಗಿ ಒಪ್ಪಿಕೊಂಡಿದ್ದಾನೆ.


























