ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಎಐ ತಂತ್ರಜ್ಞಾನ ಬಳಸಿ ತಿರುಚಿದ ವಿಡಿಯೋ ಹಂಚಿದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
2025ರ ಅಕ್ಟೋಬರ್ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ “ನಝೀರ ಮಂಗಳೂರು” ಎಂಬ ಖಾತೆಯಿಂದ ತಿರುಚಿದ ವಿಡಿಯೋವನ್ನು ಹಂಚಲಾಗಿತ್ತು. ಈ ವಿಡಿಯೋ ಸಮಾಜದಲ್ಲಿ ಕೋಮು ಉದ್ವಿಗ್ನತೆ ಉಂಟುಮಾಡುವ ರೀತಿಯದ್ದಾಗಿದ್ದು, ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆಯ ಕಲಂ 196, 353(1) ಮತ್ತು 351(2) ಅಡಿಯಲ್ಲಿ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ತನಿಖೆಯ ವೇಳೆ “ನಝೀರ ಮಂಗಳೂರು” ಖಾತೆಯ ಹಿಂದೆ ಮಹಮ್ಮದ್ ರಫೀಕ್ (38) ಎಂಬಾತನಿರುವುದು ಪತ್ತೆಯಾಗಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕುಡೆಲ್ ಹೌಸ್ ನಿವಾಸಿಯಾಗಿದ್ದಾರೆ.
ಪೊಲೀಸರು ಮಾರ್ಚ್ 22, 2026 ರಂದು ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳೂರು ನಗರ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಂಚುವುದರಿಂದ ಉಂಟಾಗುವ ಕಾನೂನು ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.



























