ಸುಳ್ಯ: 2018ರಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ನ್ಯಾಯಾಲಯವು ಒಂದು ವರ್ಷದ ಸಜೆ ವಿಧಿಸಿದೆ.
2018ರ ಮೇ 16ರಂದು ರಾತ್ರಿ ಸುಳ್ಯ ಪೊಲೀಸ್ ಠಾಣೆಯಲ್ಲಿ IPC 379 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತುಮಕೂರು ಮೂಲದ ಅಶ್ವನ್ ಗೌಡ ಜೆ.ಪಿ. ವಿರುದ್ಧ ಆರೋಪ ಸಾಬೀತಾಗಿ, ನ್ಯಾಯಾಲಯವು ಅವರನ್ನು ಪ್ರೊಬೇಷನ್ ಆಫ್ ಆಫೆಂಡರ್ಸ್ ಆಕ್ಟ್ ಅಡಿಯಲ್ಲಿ ಬಿಡುಗಡೆ ಮಾಡಿತ್ತು. ಆದರೆ ನಂತರ ಅವರು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ, ಅವರ ವಿರುದ್ಧ ವಾರಂಟ್ ಜಾರಿಯಾಗಿತ್ತು.
ಮಾರ್ಚ್ 24, 2026ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಹೇಶ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಕಿರಣ ಅವರ ತಂಡ ತುಮಕೂರಿನ ಗುಂಗೂರುಮಳೆಯಲ್ಲಿ ಆರೋಪಿಯನ್ನು ಬಂಧಿಸಿತು. ಬಳಿಕ ಅವರನ್ನು ಸುಳ್ಯದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಣ್ಣ ಹೆಚ್.ಆರ್. ಅವರು ಆರೋಪಿಗೆ IPC 380 ಅಡಿಯಲ್ಲಿ ಒಂದು ವರ್ಷ ಸಾದಾರಣ ಕಾರಾಗೃಹ ಶಿಕ್ಷೆ ಹಾಗೂ ₹1000 ದಂಡ ವಿಧಿಸಿದರು. ದಂಡ ಪಾವತಿಸದಿದ್ದರೆ 10 ದಿನಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದು ಆದೇಶಿಸಿದರು.
ಈ ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೀತಿ ಎಂ.ಸಿ. ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದರು.


























