ಸುಳ್ಯ: ಹಳೆಗೇಟು ಮೊಗರ್ಪಣೆ ಸೇತುವೆ ಸಮೀಪ ಕಳೆದ ರಾತ್ರಿ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿ ಬಿದ್ದ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಲಾರಿಯ ಚಾಲಕನಿಗೆ ಗಾಯವಾಗಿದ್ದು, ಅವರನ್ನು ಸುಳ್ಯದ ಶಿವ ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ಕಂಟೈನರ್ ಲಾರಿ ಸುಳ್ಯದಿಂದ ಪುತ್ತೂರು ಕಡೆಗೆ ಸಂಚರಿಸುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದಿದೆ.
ಅಪಘಾತದ ಪರಿಣಾಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು 1.24 ಲಕ್ಷ ರೂಪಾಯಿ ಮೌಲ್ಯದ ಹಂಚುಗಳು ಸಂಪೂರ್ಣವಾಗಿ ಪುಡಿಪುಡಿಯಾಗಿ ಭಾರಿ ನಷ್ಟ ಉಂಟಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.



























