ಸುಳ್ಯ, ಮಾ.26: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮಾರ್ಚ್ 26ರ ಬೆಳಗ್ಗಿನ ಜಾವ, ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ ಅವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಸುಳ್ಯ ಆಲೆಟ್ಟಿ ಕ್ರಾಸ್ ಸಮೀಪ ಸಂಚರಿಸುತ್ತಿದ್ದ KL 59 D 2979 ಸಂಖ್ಯೆಯ ಬೊಲೆರೊ ಪಿಕಪ್ ವಾಹನ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿತು. ತಕ್ಷಣ ವಾಹನವನ್ನು ಆಲೆಟ್ಟಿ ಗ್ರಾಮದ ಮಿತ್ತಡ್ಕ ರೋಟರಿ ಶಾಲೆ ಬಳಿ ತಡೆದು ಪರಿಶೀಲನೆ ನಡೆಸಲಾಯಿತು.
ಈ ವೇಳೆ ವಾಹನದಲ್ಲಿದ್ದ ಒಬ್ಬ ವ್ಯಕ್ತಿ ಪರಾರಿಯಾಗಿದ್ದರೆ, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಚಾಲಕನು ಕೇರಳದ ಕಣ್ಣೂರು ನಿವಾಸಿ ಇಸಾಕ್ ಕೆ.ಕೆ (40) ಎಂದು ಗುರುತಿಸಲಾಗಿದೆ.
ವಾಹನವನ್ನು ಪರಿಶೀಲಿಸಿದಾಗ, ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಿಸುತ್ತಿರುವುದು ಪತ್ತೆಯಾಯಿತು. ವಿಚಾರಣೆ ವೇಳೆ, ಅಮರಪಡನೂರು ಗ್ರಾಮದ ಸಂತೋಷ್ ಎಂ.ಎಸ್ (48) ಅವರ ದನಗಳನ್ನು ಸುಳ್ಯ ನಿವಾಸಿ ಇಬ್ರಾಹಿಂ ಎ.ಎಂ (32) ಮೂಲಕ ಖರೀದಿಸಿ, ಅಗತ್ಯ ಪರವಾನಿಗೆ ಪಡೆಯದೆ ವಧೆ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದಾಗಿ ತಿಳಿದುಬಂದಿದೆ.
ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 39/2026 ದಾಖಲಿಸಲಾಗಿದ್ದು, ಕರ್ನಾಟಕ ಗೋಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂಗಳು 4, 5, 6, 7, 12 ಹಾಗೂ ಪ್ರಿವೆನ್ಷನ್ ಆಫ್ ಕ್ರೂರಾಟಿ ಟು ಅನಿಮಲ್ಸ್ ಕಾಯ್ದೆ 1960ರ 11(1)(D) ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.


























