ಕಾಪು: ಕ್ರೇನ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉದ್ಯಾವರ ಗ್ರಾಮದ ಹೋಟೆಲ್ ಲಲಿತ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಕಾರವಾರ ಮೂಲದ ಸುನೀಲ್ ರಾಮಚಂದ್ರ ಅವರ ಪತ್ನಿ ದಿವ್ಯ ಎಸ್. (45) ಎಂದು ಗುರುತಿಸಲಾಗಿದೆ.
ಇವರು ಚಾಲಕ ಹಾಗೂ ತಮ್ಮ ಮಗಳ ಜೊತೆ ಕಾರಿನಲ್ಲಿ ಮಂಗಳೂರಿನ ಆಸ್ಪತ್ರೆಯಿಂದ ಹೊರಟಿದ್ದು, ದಾರಿ ಮಧ್ಯೆ ಉದ್ಯಾವರದಲ್ಲಿ ಹೋಟೆಲ್ ಎದುರು ಕಾರು ನಿಲ್ಲಿಸಿದ್ದರು. ಅಲ್ಲಿ ಮಗನಿಗೆ ಬ್ಯಾಟ್ ಖರೀದಿಸಲು ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಬ್ಯಾಟ್ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರ ಬಳಿ ಹೋಗಿದ್ದು, ರಸ್ತೆ ದಾಟಲು ನಿಂತಿದ್ದ ದಿವ್ಯ ಅವರಿಗೆ ಅದೇ ರಸ್ತೆಯ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕ್ರೇನ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ದಿವ್ಯ ಅವರು ಕ್ರೇನ್ನ ಮುಂದಿನ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























