ಸುಳ್ಯ: ಹಲವು ಗಂಭೀರ ಅಪರಾಧಗಳಲ್ಲಿ ಆರೋಪಿಯಾಗಿದ್ದು ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಕೊನೆಗೂ ಪತ್ತೆಹಚ್ಚಿದ್ದಾರೆ.
ಕಡಬ ಪೊಲೀಸ್ ಠಾಣೆಯ ಅ.ಕ್ರ. 15/2012 (ಕಲಂ 302, 201 IPC) ಪ್ರಕರಣದ ಕನ್ವಿಕ್ಷನ್ ವಾರಂಟ್ ಆರೋಪಿ, ಸುಳ್ಯ ಅಜ್ಜಾವರ ನಿವಾಸಿ ಎನ್.ಎಂ. ಅಜೀಜ್ಗೆ ಕರ್ನಾಟಕ ಉಚ್ಚ ನ್ಯಾಯಾಲಯವು 10 ವರ್ಷಗಳ ಶಿಕ್ಷೆ ವಿಧಿಸಿತ್ತು. ಆದರೆ 2018ರಲ್ಲಿ ಕೇರಳ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ, ಪೊಲೀಸರ ಮೇಲೆ ಹಲ್ಲೆ ನಡೆಸಿ ಆತ ತಪ್ಪಿಸಿಕೊಂಡಿದ್ದನು.
ನಂತರ ತನ್ನ ಹೆಸರು ಬದಲಿಸಿಕೊಂಡು ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿ ಬಸವರಾಜು ಎಂಬ ಹೆಸರಿನಲ್ಲಿ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದನು. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಇತ್ತೀಚೆಗೆ ಆತ ಆಂಧ್ರಪ್ರದೇಶದ ಚಿತ್ತೂರು ಜೈಲಿನಲ್ಲಿ ಇರುವುದನ್ನು ಖಚಿತಪಡಿಸಿಕೊಂಡರು.
ಸಂಬಂಧಪಟ್ಟ ನ್ಯಾಯಾಲಯದ ಬಾಡಿವಾರಂಟ್ ಮೂಲಕ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಮೂರು ಲಾಭಕ್ಕಾಗಿ ನಡೆದ ಕೊಲೆ ಪ್ರಕರಣಗಳು ಹಾಗೂ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಈತನ ಬಂಧನದಿಂದ ಕೇರಳದ 3 LPC ಪ್ರಕರಣಗಳು, ಸುಳ್ಯ ಠಾಣೆಯ 2 LPC ಪ್ರಕರಣಗಳು ಮತ್ತು ಕಡಬ ಠಾಣೆಯ 1 ಕನ್ವಿಕ್ಷನ್ ವಾರಂಟ್ ಪ್ರಕರಣ ಪತ್ತೆಯಾಗಿವೆ.
ಈ ಕಾರ್ಯಾಚರಣೆ ಪೊಲೀಸರ ಸತತ ಪ್ರಯತ್ನದ ಫಲವಾಗಿ ಸಾಧ್ಯವಾಗಿದ್ದು, ಪ್ರಕರಣಗಳ ತನಿಖೆಗೆ ಮಹತ್ವದ ಮುನ್ನಡೆ ದೊರೆತಿದೆ.


























