ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿಯ ಹರಕೆ ಹುಂಡಿಯನ್ನು ಕಳ್ಳನೊಬ್ಬ ಕಳವು ಮಾಡಿರುವ ಘಟನೆ ನಡೆದಿದ್ದು, ಕಳ್ಳತನದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಳ್ಳತನದ ಘಟನೆ ಮಾರ್ಚ್ 30 ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ನಡೆದಿದ್ದು ವ್ಯಕ್ತಿಯೊಬ್ಬ ಮಸೀದಿಯ ಆವರಣ ಪ್ರವೇಶಿಸಿ ಹರಕೆ ಹುಂಡಿಯನ್ನು ಕಳವು ಮಾಡಿದ್ದಾನೆ.
ಕಳ್ಳತನ ಮಾಡುತ್ತಿರುವ ದೃಶ್ಯ ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಆರೋಪಿ ನೀಲಿ ಟಿ-ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿರುವುದು ಕಂಡುಬಂದಿದೆ.
ಈ ಬಗ್ಗೆ ಮಸೀದಿ ಕಮಿಟಿಯವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯನ್ನು ಪ್ರಕಟಿಸಿದ್ದು ಸಾರ್ವಜನಿಕರಲ್ಲಿ ವಿನಂತಿ: ಸೋಮವಾರ ಮಧ್ಯಾಹ್ನದ ಸಮಯದಲ್ಲಿ ಈ ಪರಿಸರದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಅಥವಾ ವೀಡಿಯೋದಲ್ಲಿ ಕಾಣಿಸುತ್ತಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ಕೂಡಲೇ ಸಂಬಂಧಪಟ್ಟವರನ್ನು ಸಂಪರ್ಕಿಸುವಂತೆ ವಿನಂತಿಸಿಕೊಂಡಿದ್ದಾರೆ.


























