ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಲ್ಗುಣಿ ನದಿಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ದಾರುಣ ಅಪಘಾತದಲ್ಲಿ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ.
ಕುಂಜತ್ತಬೈಲ್ ನಿವಾಸಿಗಳಾದ ಗಣೇಶ್ (28) ಮತ್ತು ರಾಯಲ್ (24) ಮೃತಪಟ್ಟ ಯುವಕರಾಗಿದ್ದು, ನಿತೇಶ್ (29) ಅಪಾಯದಿಂದ ಪಾರಾಗಿದ್ದಾರೆ. ಮೂವರು ಯುವಕರು ಬುಧವಾರ ಬೆಳಗಿನ ಜಾವ ಸುಮಾರು 1:30ರ ವೇಳೆಗೆ ಸಣ್ಣ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು.
ನದಿಯ ಮಧ್ಯಭಾಗ ತಲುಪಿದಾಗ ದೋಣಿ ಆಕಸ್ಮಿಕವಾಗಿ ಮಗುಚಿ ಬಿದ್ದಿದ್ದು, ಮೂವರೂ ನೀರಿಗೆ ಬಿದ್ದಿದ್ದಾರೆ. ಈ ಸಂದರ್ಭ ನಿತೇಶ್ ಅವರು ಈಜಿಕೊಂಡು ದಡ ಸೇರಿದ್ದು, ಗಣೇಶ್ ಮತ್ತು ರಾಯಲ್ ಅವರಿಗೆ ಈಜಲು ಬಾರದೆ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಶೋಧ ಕಾರ್ಯ ಆರಂಭಿಸಿದರು. ಬುಧವಾರ ಮಧ್ಯಾಹ್ನ ಗಣೇಶ್ ಅವರ ಮೃತದೇಹ ಪತ್ತೆಯಾಗಿದ್ದು, ರಾಯಲ್ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.


























