ಪುತ್ತೂರು: ಚಿನ್ನಾಭರಣ ಖರೀದಿಸುವ ಸೋಗಿನಲ್ಲಿ ಜ್ಯುವೆಲ್ಲರಿ ಮಳಿಗೆಯೊಂದಕ್ಕೆ ಬಂದ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ಆಭರಣ ವೀಕ್ಷಿಸಿ ಚಿನ್ನದ ಬಳೆಯೊಂದನ್ನು ಕಳವು ಮಾಡಿದ ಘಟನೆ ವರದಿಯಾಗಿದೆ.
ಇಲ್ಲಿನ ಹೆಗ್ಡೆ ಆರ್ಕೆಡ್‌ನಲ್ಲಿರುವ ಆರ್.ಕೆ.ಜ್ಯುವೆಲ್ಲರ್‌ನಲ್ಲಿ ಘಟನೆ ನಡೆದಿದೆ. ಮಾಲಕ ಕೃಷ್ಣತ್ ನಾಮದೇವ್ ಸುರ್ವೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ‘ಮಾ.30ರಂದು ಇಬ್ಬರು ಅಪರಿಚಿತ ಮಹಿಳೆ ಹಾಗೂ ಇನ್ನೋರ್ವ ಪುರುಷ ಗ್ರಾಹಕರಾಗಿ ಅಂಗಡಿಗೆ ಬಂದಿದ್ದು,ಬೇರೆ ಬೇರೆ ವಿನ್ಯಾಸದ ಅಭರಣಗಳನ್ನು ತೋರಿಸುವಂತೆ ಹೇಳಿದರು. ಅದರಂತೆ ಹಲವು ವಿನ್ಯಾಸ ಹೊಂದಿರುವ ಬೇರೆ ಬೇರೆ ಚಿನ್ನದ ಬಳೆಗಳನ್ನು ತೋರಿಸಲಾಗಿತ್ತು.
ಆದರೆ ಗ್ರಾಹಕರಸೋಗಿನಲ್ಲಿ ಬಂದಿದ್ದ ಅವರು ಆಭರಣ ಖರೀದಿಸದೇ ತೆರಳಿದ ಬಳಿಕ ಪರಿಶೀಲಿಸಿದಾಗ ಅಂದಾಜು 23 ಗ್ರಾಂ ತೂಕದ ಚಿನ್ನದ ಬಳೆ ಕಳ್ಳತನವಾಗಿರುವುದು ಕಂಡುಬಂದಿದೆ.
ಕಳವಾದ ಚಿನ್ನದ ಬಳೆಯ ಅಂದಾಜು ಮೌಲ್ಯ ರೂ.3,10,500 ಆಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


























