ಕಡಬ: ಪ್ರೀತಿ ವಿಚಾರವಾಗಿ ಮಾತನಾಡಲು ಹೋದ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕಿನ ಐತ್ತೂರು ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ.
ಸುಬ್ರಹ್ಮಣ್ಯ ದೇವಳದಲ್ಲಿ ಸ್ಕಂದ ಲಾಡ್ಜ್ ನಿವಾಸಿ ಸೆಕ್ಯೂರಿಟಿ ಗಾರ್ಡ್ ಆಗಿರುವ ಗಂಗಾ ಪ್ರಸನ್ನ (30) ಎಂಬವರು ಘಟನೆ ಬಗ್ಗೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆಯ ವಿವರ: ದೂರುದಾರರಾದ ಗಂಗಾ ಪ್ರಸನ್ನ ಅವರು ಕಳೆದ ಮೂರು
ವರ್ಷಗಳಿಂದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಅಲ್ಲಿನ ಪ್ರಭಾಕರ ಎಂಬವರ ಪರಿಚಯ ಹೊಂದಿದ್ದರು.
ಕ್ರಮೇಣ ಇವರಿಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಈ ವಿಚಾರದ ಕುರಿತು ಮಾತನಾಡಲು ಗಂಗಾ ಪ್ರಸನ್ನ ಅವರು ಏ. 3ರಂದು ರಾತ್ರಿ ಸುಮಾರು 9 ಗಂಟೆಗೆ, ಐತ್ತೂರು ಗ್ರಾಮದ ನೆಲ್ಲಿಕಟ್ಟೆಯಲ್ಲಿರುವ ಪ್ರಭಾಕರ ಅವರ ಮನೆಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಪ್ರಭಾಕರ ಏಕಾಏಕಿ ಏರು ಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನನ್ನು ಕೆಳಗೆ ತಳ್ಳಿ ಕೈಯಿಂದ ಹಲ್ಲೆ ನಡೆಸಿದ್ದಾನೆ. ತಾನು ಕಿರುಚಿಕೊಂಡಾಗ ನೆರೆಹೊರೆಯವರು ಬರುತ್ತಿರುವುದನ್ನು ಗಮನಿಸಿದ ಆರೋಪಿ, ಇನ್ನೊಮ್ಮೆ ನನ್ನ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿರುವುದಾಗಿ ಗಂಗಾ ಪ್ರಸನ್ನ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಕಡಬ ಪೊಲೀಸರು ಆರೋಪಿ ಪ್ರಭಾಕರರವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 115(2), 352, 742 351 ರಂತೆ ಪ್ರಕರಣ ದಾಖಲಿಸಿದ್ದಾರೆ.




























