ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ದಾಸಕೋಡಿಯಿಂದ ನೀರಾಪಾದೆಯವರೆಗೆ ರಸ್ತೆ ಬದಿಯಲ್ಲಿರುವ ಮರದ ಕೊಂಬೆಗಳು ವಿದ್ಯುತ್ ವಯರ್ ಗೆ ಸುತ್ತಿಕೊಂಡಿದ್ದರಿಂದಾಗಿ ಈ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಯಾಗುತ್ತಿತ್ತು. ಈಗಾಗಲೇ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಮಾಹಿತಿಯನ್ನೂ ನೀಡಲಾಗಿತ್ತು. ಕೋವಿಡ್ ಹಾಗೂ ಮಳೆ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಆಗಿರಲಿಲ್ಲ. ಅದಾಗ ಊರಿನ ಕೆಲವು ಯುವಕರ ತಂಡ ಜತೆಯಾಗಿ ಸಮಸ್ಯೆ ಕುರಿತಂತೆ ಊರಿನವರ ಜತೆ ಕೈ ಜೋಡಿಸಿ ಮೆಸ್ಕಾಂ ವಿಭಾಗಕ್ಕೆ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಬಿನ್ನವಿಸಿದಾಗ ಜೂ. 20ರಂದು ಕಡೆಗೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಒಂದಷ್ಟು ಯುವಕರ ಮನವಿಯನ್ನು ಕೇಳಿದ ಮೆಸ್ಕಾಂ ಇಲಾಖೆ ಲೈನ್ ಮ್ಯಾನ್ ರಮೇಶ್ ಅವರನ್ನು ಊರಿನತ್ತ ಕಳಿಸಿಕೊಟ್ಟಿದ್ದು ಇದರ ಜತೆಗೆ ಯುವಕರಾದ ಚಂದ್ರಶೇಖರ್, ದಿವಾಕರ ಚೆಂಡೆ, ಕರುಣಾಕರ, ಪ್ರಕಾಶ್, ರಾಹುಲ್, ಚಂದ್ರಹಾಸ ಅಮೀನ್, ದಿನೇಶ್ ನಾಯ್ಕ್, ದೇವದಾಸ ಚೆಂಡೆ, ಅಭಿಷೇಕ್, ರವಿ, ಮನೋಹರ್, ಯೋಗೀಶ್, ಭೌತೀಶ್, ಜನಾರ್ದನ ಸೇರಿದಂತೆ ಹಲವರು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ರವರೆಗೂ ಎಲ್ಲಾ ಕಡೆಯ ಮರದ ಕೊಂಬೆ, ಬಳ್ಳಿ ಸುತ್ತಿರುವ ಮರದ ಪೊದೆಗಳನ್ನು ತೆರವುಗೊಳಿಸಿದ್ದು ಊರಿನ ವಿದ್ಯುತ್ ಸಮಸ್ಯೆಯೂ ನಿವಾರಣೆಯಾಗಿದೆ.