ಬಂಟ್ವಾಳ : ಗ್ಯಾಸ್ ಗೀಸರ್‌ನಿಂದ ಬಿಡುಗಡೆಯಾದ ವಿಷ ಅನಿಲದ ಪರಿಣಾಮ ಸ್ನಾನದ ವೇಳೆ ಯುವಕನೋರ್ವ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಫರಂಗಿಪೇಟೆಯ ಮಾರಿಪಳ್ಳ ಎಂಬಲ್ಲಿ ಜು.12 ರ ಸೋಮವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಇಸ್ಮಾಯಿಲ್ ಅವರ ಪುತ್ರ ಇಜಾಝ್ ಅಹ್ಮದ್ (23) ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿಯ ಅಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ ತಂದೆಯ ಅನಾರೋಗ್ಯದ ಹಿನ್ನಲೆಯಲ್ಲಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದ. ಸೋಮವಾರ ಸಂಜೆ ಗ್ಯಾಸ್ ಗೀಸರ್ ಬಳಸಿ ಸ್ನಾನಕ್ಕೆ ತೆರಳಿದ್ದ. ಇಜಾಝ್ ಅಹ್ಮದ್ ಒಂದು ಗಂಟೆಯಾದರೂ ಹೊರ ಬರದ ಹಿನ್ನೆಲೆಯಲ್ಲಿ ಮನೆಯವರು ಬಾಗಿಲು ಬಡಿದು ಕೂಗಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆತಂಕಗೊಂಡ ಆತನ ತಂದೆ ಮತ್ತು ಸಹೋದರರು, ಕೂಡಲೇ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಸ್ನಾನಗೃಹದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿರುವುದು ಕಂಡಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ.
ಸ್ನಾನ ಗೃಹದಲ್ಲಿ ಅಳವಡಿಸಿದ್ದ ಗ್ಯಾಸ್ ಗೀಸರ್ ಸೋರಿಕೆಯಾಗಿ ಕಾರ್ಬನ್ ಮಾನಾಕ್ಸೈಡ್ ಹೊರ ಬಂದಿದೆ. ಆಗ ಆ ವಿಷ ಅನಿಲ ಸೇವಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.