ವಿಟ್ಲ : ಭಾರೀ ಮಳೆಯ ಕಾರಣದಿಂದಾಗಿ ಕೊಳ್ನಾಡು ಗ್ರಾಮದ ಕಲ್ಲಮಜಲು ಸೇತುವೆಯ ತಡೆಗೋಡೆ ಕುಸಿದು ಹೊಳೆಯ ಪಾಲಾಗಿದೆ. ಇದರಿಂದಾಗಿ ಸೇತುವೆ ಅಪಾಯದ ಸ್ಥಿತಿಗೆ ತಲುಪಿದೆ.
ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಲ್ಲಮಜಲು ಸೇತುವೆಯ ಬಲಭಾಗದಲ್ಲಿರುವ ಸುಮಾರು 25 ಅಡಿಯಷ್ಟು ಉದ್ದದ ತಡೆಗೋಡೆ ಹೊಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ಸೇತುವೆಯ ಅಡಿ ಭಾಗವನ್ನು ತಲುಪಲು ಕೇವಲ ಹತ್ತು ಅಡಿಗಳಷ್ಟು ಬಾಕಿ ಉಳಿದಿದ್ದು, ಈ ಬಾರಿಯ ಮಳೆಗಾಲ ಮುಗಿಯುವ ಮುನ್ನ ಸೇತುವೆಗೆ ಭಾರೀ ಅಪಾಯ ಎದುರಾಗಲಿದೆ ಎನ್ನಲಾಗಿದೆ. ಸೆರ್ಕಳ, ಪೀಲ್ಯಡ್ಕ, ಕುಲ್ಯಾರು, ತೋಡ್ಲ ನಾರ್ಶ ಸುತ್ತಮುತ್ತಲಿನ 2 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ವಿಟ್ಲ ಅಥವಾ ಸಾಲೆತ್ತೂರು ಅನ್ನು ಸಂಪರ್ಕಿಸಲು ಕಲ್ಲಮಜಲು ಸೇತುವೆ ಏಕೈಕ ಆಧಾರಸ್ತಂಭವಾಗಿದೆ. ಅಲ್ಲದೇ ಕುಡ್ತಮುಗೇರು, ಕರಾಯಿ ಮೂಲಕ ಕಲ್ಲಡ್ಕ ಸಂಪರ್ಕಿಸಲು ಇದೇ ಸೇತುವೆ ಮುಖ್ಯವಾಗಿದೆ. ತಕ್ಷಣವೇ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳುವ ಮೂಲಕ ತಡೆಗೋಡೆ ಮತ್ತಷ್ಟು ಕುಸಿಯುವುದನ್ನು ತಡೆಯಲು ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ.