ಪುತ್ತೂರು: ಈ ಹಿಂದೆ ಪುತ್ತೂರಿನಲ್ಲಿ ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಕಟ್ಟಡದಲ್ಲಿ ಮುಖ್ಯ ಕಚೇರಿಯನ್ನು ಹೊಂದಿ ವ್ಯವಹರಿಸುತ್ತಿದ್ದ ಶರ್ಮಹಾನ್ ವಿವಿಧೋದ್ದೇಶ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ಸಂಸ್ಥೆಯು ಠೇವಣಿದಾರರಿಗೆ ಹಣ ಹಿಂತಿರುಗಿಸದೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಸಲುವಾಗಿ ಸಂಸ್ಥೆಯ ಅಧ್ಯಕ್ಷ, ವ್ಯವಸ್ಥಾಪಕ ಮತ್ತು ಕೆಲ ನಿರ್ದೇಶಕರಿಗೆ ಸೇರಿದ ಸ್ಥಿರ ಸೊತ್ತುಗಳ ಜತ್ತಿಗೆ ಸರಕಾರದಿಂದ ಅಧಿಸೂಚನೆ ಪ್ರಕಟವಾಗಿದೆ.
ಸಂಸ್ಥೆಗೆ ಸೇರಿದ ಸೊತ್ತು ಮತ್ತು ಸಂಸ್ಥೆಯ ಪ್ರವರ್ತಕರ, ಪಾಲುದಾರರ, ನಿರ್ದೇಶಕರ ಅಥವಾ ವ್ಯವಸ್ಥಾಪಕರ ಯಾ ಸದಸ್ಯರಿಗೆ ಸೇರಿದ ಚಿರ ಮತ್ತು ಚರ ಸ್ವತ್ತುಗಳನ್ನು ಸರಕಾರದ
ವತಿಯಿಂದ ಜಪ್ತಿ ಮಾಡಿಕೊಳ್ಳುವ ಕುರಿತು ಅಧಿಸೂಚನೆ ಹೊರಡಿಸಿ ಪತ್ರಿಕೆಯಲ್ಲಿ ಪ್ರಕಟಣೆ ನೀಡಲಾಗಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಹೆಸರಿನಲ್ಲಿ ಸರ್ಕಾರದ ಕಂದಾಯ ಇಲಾಖೆ (ವಿಶೇಷ ಕೋಶ)ಯ ಅಧೀನ ಕಾರ್ಯದರ್ಶಿ(ಪ್ರಭಾರ) ಎ೦.ಸುಮಿತ್ರ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ. ಪ್ರಸ್ತುತ 2,84,93,816 ರೂ.ಮಾರುಕಟ್ಟೆ ದರ(ಖರೀದಿ ದರ 6,88,01,939)ದ ಒಟ್ಟು 41 ಆಸ್ತಿಗಳನ್ನು ಜಪ್ತಿ ಮಾಡುವ ಕುರಿತು ಪ್ರಕಟಣೆಯಲ್ಲಿ ವಿವರ
ನೀಡಲಾಗಿದೆ.
ಸಂಸ್ಥೆಯ ಅಧ್ಯಕ್ಷ ಗಿರೀಶ್ ಕುಮಾರ್, ವ್ಯವಸ್ಥಾಪಕ ಕೇಶವ ಅಂಚನ್, ನಿರ್ದೇಶಕರಾಗಿದ್ದ ಪುತ್ತೂರು ಕಸಬಾದ ನೂಜಿ ದುಗ್ಗಣ್ಣ ನಾಯ್ಕರ ಮಗ ಕೃಷ್ಣ ನಾಯ್ಕ, ಬಿ.ರಾಮ ಭಟ್ ಅವರ ಮಗ ಮುರಳೀಕೃಷ್ಣ ಹಸಂತಡ್ಕ, ಪಿ.ವಿಶ್ವನಾಥರ ಮಗ ಯಾದವ ಕುಮಾರ್ ಅವರಿಗೆ ಸೇರಿರುವ ಆಸ್ತಿ ಜಪ್ತಿ ಮಾಡಿರುವ ಕುರಿತು ಪ್ರಕಟಣೆ ಹೊರಡಿಸಲಾಗಿದೆ.
ಇವರಲ್ಲಿ ಸಂಸ್ಥೆಯ ಅಧ್ಯಕ್ಷ ಗಿರೀಶ್ ಶರ್ಮ (ಅವರ ತಂದೆ ಗಣೇಶ್ ಶರ್ಮ ಅವರ ಹೆಸರಲ್ಲಿರುವ 3 ಜಮೀನು), ವ್ಯವಸ್ಥಾಪಕ ಕೇಶವ ಟಿ.ಅಂಚನ್ (ಕೇಶವ ಟಿ.ಅಂಚನ್, ಅವರ ತಾಯಿ ಜಾನಕಿ, ಸಹೋದರಿ ಚಂದ್ರಾವತಿ ಜಂಟಿ ಹೆಸರಲ್ಲಿರುವ 2 ಜಮೀನಿನಲ್ಲಿ ಕೇಶವ ಅವರಿಗೆ
ಸೇರಿದ ಭಾಗ), ನಿರ್ದೇಶಕರಾಗಿದ್ದ (ಮುರಳೀಕೃಷ್ಣ ಹಸಂತಡ್ಕ ಅವರ ಹೆಸರಲ್ಲಿರುವ 8 ಸ್ವಂತ ಆಸ್ತಿ, ಅವರ ತಂದೆ ಬಿ.ರಾಮ ಭಟ್ ಅವರ ಹೆಸರಲ್ಲಿರುವ 4 ಆಸ್ತಿಯಲ್ಲಿ ಮುರಳೀಕೃಷ್ಣ
ಅವರಿಗೆ ಸೇರಿದ ಅಂಶ, ಬಿ.ರಾಮ ಭಟ್, ಸುಮತಿ, ಮುರಳೀಕೃಷ್ಣ, ನಯನ ಕುಮಾರಿ, ಅಶ್ವಿನಿ ಶಂಕರಿ ಹೆಸರಲ್ಲಿರುವ ಜಂಟಿ ಆಸ್ತಿಯಲ್ಲಿ ಮುರಳೀಕೃಷ್ಣ ಅವರಿಗೆ ಸೇರಿದ ಅಂಶ, ಸುಮತಿ ಆರ್.ಭಟ್ ಅವರ ಹೆಸರಲ್ಲಿರುವ ಆಸ್ತಿಯಲ್ಲಿ ಮುರಳೀಕೃಷ್ಣ ಅವರಿಗೆ ಸೇರಿದ ಅಂಶ), ನಿರ್ದೇಶಕ ಬಾಲಚಂದ್ರ ಸೊರಕೆ (ಅವರ ಹೆಸರಲ್ಲಿರುವ 3 ಸ್ವಂತ ಆಸ್ತಿ, ತಂದೆ ಮೋನಪ್ಪ ನಾಯ್ಕರ ಹೆಸರಲ್ಲಿರುವ 8 ಆಸ್ತಿಯಲ್ಲಿ ಬಾಲಚಂದ್ರ ಅವರಿಗೆ ಸೇರಿದ ಭಾಗ), ನೂಜಿ ಕೃಷ್ಣನಾಯ್ಕ (ಅವರಿಗೆ ಸೇರಿದ 9 ಸ್ವಂತ ಆಸ್ತಿ), ಯಾದವ ಕುಮಾರ್ (ಅವರ | ಸ್ವಂತ ಜಮೀನು ಸೇರಿದಂತೆ ಕೋಟ್ಯಂತರ ರೂ.ಬೆಲೆ ಬಾಳುವ ಒಟ್ಟು 41 ಆಸ್ತಿ ಜಪ್ತಿ ಮಾಡುವ ಕುರಿತು ಅಧಿಸೂಚನೆ ಹೊರಡಿಸಲಾಗಿದೆ.
ಶರ್ಮಹಾನ್ ವಿವಿಧೋದ್ದೇಶ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ಇವರುಠೇವಣಿದಾರರಿಂದ ಗುಟ್ಟಾಗಿ ಹಾಗೂ ಕಾನೂನು ಬಾಹಿರವಾಗಿ ಠೇವಣಿಗಳನ್ನು ಅಥವಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ಮೋಸದ ವ್ಯವಹಾರಗಳಲ್ಲಿ ತೊಡಗಿರುವುದು ಹಾಗೂ ಆ ಬಳಿಕ ಅದನ್ನು ಹಿಂತಿರುಗಿಸಲು ವಿಫಲವಾಗಿರುವುದು ಸರಕಾರದ ಗಮನಕ್ಕೆ ಬಂದಿದೆ.
ಶರ್ಮಹಾನ್ ಸಂಸ್ಥೆ ಅಥವಾ ಅವರ ಸಹವರ್ತಿ ಜನರು ಠೇವಣಿದಾರರಿಂದ ಸಂಗ್ರಹಿಸಲಾದ ಹಣದಿಂದ ಜಮೀನು, ಚರ ಮತ್ತು ಸ್ಥಿರಾಸ್ತಿಗಳನ್ನು, ನಗದು ಹಾಗೂಇತರೆ ವಸ್ತುವನ್ನು ಅರ್ಜಿಸಿರುವುದು, ಆಮೂಲಕ ಠೇವಣಿ ಹಾಗೂ ಹಣವನ್ನು ಪಡೆದಿರುವ ಉದ್ದೇಶಿತ ಉದ್ದೇಶಗಳಿಗೆ ಬಳಸದೆ ಬೇರೆ ಕಡೆ ವರ್ಗಾಯಿಸಿರುವುದು ಸರಕಾರದ ಗಮನಕ್ಕೆ
ಬಂದಿದೆ. ಶರ್ಮಹಾನ್ ವಿವಿಧೋದ್ದೇಶ ಸೌಹಾರ್ದ ಕೋಆಪರೇಟಿವ್ ಹಾಗೂ ಅವರ ಸಹವರ್ತಿ ಜನರ ಕೃತ್ಯಗಳು ಮುಗ್ಧಜನರಿಗೆ ವಂಚಿಸುವ ಉದ್ದೇಶದಿಂದ ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಲು ಕಾರಣಗಳನ್ನು ಹೊಂದಿರುವ ಸರಕಾರವು ದ.ಕ.ಜಿಲ್ಲಾಧಿಕಾರಿಯವರ ವರದಿಯನ್ನು ಪರಿಗಣಿಸಿ ಹಾಗೂ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವುದು ತುರ್ತು ಅಗತ್ಯವಿದೆ ಎಂದು ಸ್ವಯಂ ಮನವರಿಕೆ ಮಾಡಿಕೊಂಡು, ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ 2004(2005ರ
ಕರ್ನಾಟಕ ಅಧಿನಿಯಮ, 30)ರ ಕಲಂ 3(2)ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶರ್ಮಹಾನ್ ಸಂಸ್ಥೆಗೆ ಸೇರಿದೆ ಎನ್ನಲಾದ ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡುವುದು ಅವಶ್ಯಕವಾಗಿದೆ ಎಂದು ಮನಗಂಡಿರುವುದರಿಂದ, ಸದರಿ ಹಣಕಾಸು ಸಂಸ್ಥೆಯ ಅಂತಹ ಹಣ ಅಥವಾ ಇತರ ಸ್ವತ್ತುಗಳು ಅಥವಾ ಸಂಸ್ಥೆಯ ಪ್ರವರ್ತಕರ, ಪಾಲುದಾರರ, ನಿರ್ದೇಶಕರ, ವ್ಯವಸ್ಥಾಪಕರ
ಅಥವಾ ಸದಸ್ಯರ ಅಥವಾ ಯಾರೇ ಇತರ ವ್ಯಕ್ತಿಯ ವೈಯಕ್ತಿಕ ಆಸ್ತಿಗಳು, ಠೇವಣಿಗಳನ್ನು, ಬಡ್ಡಿ ಅಥವಾ ಇತರೆ ಖಾತ್ರಿ ಪ್ರಯೋಜನಗಳನ್ನು ಠೇವಣಿದಾರರಿಗೆ ಮರುಸಂದಾಯ ಮಾಡುವುದಕ್ಕೆ ಸಂಬಂಧಿಸಿ ಪ್ರಯಾಪ್ತವಾಗಿಲ್ಲವೆಂದು ಶರ್ಮಹಾನ್ ವಿವಿಧೋದ್ದೇಶ ಸೌಹಾರ್ದ ಕೋ ಆಪರೇಟಿವ್ ಲಿ. ಸಂಗ್ರಹಿಸಲಾದ ಠೇವಣಿಗಳಿಂದ ತನ್ನ ಹೆಸರಲ್ಲಾಗಲಿ ಅಥವಾ ಯಾರೇ ಇತರ ವ್ಯಕ್ತಿಗಳ ಹೆಸರಿನಲ್ಲಿ ಅರ್ಜಿಸಿದೆ ಎನ್ನಲಾದ ಆದೇಶದಲ್ಲಿ ನಿರ್ದಿಷ್ಟಪಡಿಸಲಾದ ಎಲ್ಲಾ ಸ್ಥಿರ ಸ್ವತ್ತುಗಳನ್ನು ಸರಕಾರವು ಈ ಮೂಲಕ ಜಪ್ತಿ ಮಾಡಿಕೊಳ್ಳುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಧ್ಯಕ್ಷ, ಕಾರ್ಯದರ್ಶಿಯನ್ನು ಬಂಧಿಸಿದ್ದ ಪೊಲೀಸರು: ಲಕ್ಷಾಂತರ ರೂ. ಠೇವಣಿ ಇಟ್ಟ ಗ್ರಾಹಕರೊಬ್ಬರಿಗೆ ಹಣ ಹಿಂತಿರುಗಿಸದೆ ವಂಚಿಸಿದ್ದ ಆರೋಪದಡಿ ಶರ್ಮಹಾನ್
ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಿರುದ್ದ ಮಂಗಳೂರು ಯಯ್ಯಾಡಿ ನಿವಾಸಿ ಶ್ರೀಶ ಕೇಶವ ಎಂಬವರು ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಪೊಲೀಸರು ಸಂಸ್ಥೆಯ ಅಧ್ಯಕ್ಷ ಬೆಳ್ಳಿಪಾಡಿ ಗ್ರಾಮದ ಬೇರಿಕೆ ಸಮೀಪದ ಕರ್ನೋಜಿ ನಿವಾಸಿ ಗಣೇಶ್ ಶರ್ಮರವರ ಪುತ್ರ ಗಿರೀಶ್ ಕುಮಾರ್ ಮತ್ತು ಸಂಘದ ಕಾರ್ಯದರ್ಶಿ, ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಮೋನಪ್ಪ ಪೂಜಾರಿ ರವರ ಪುತ್ರ ಕೇಶವ ಡಿ.ರವರನ್ನು ಬಂಧಿಸಿದ್ದರು.