ಬೆಳ್ತಂಗಡಿ: ವಿದ್ಯುತ್ ಕಳ್ಳತನ ಮಾಡಿ ಅದನ್ನು ತಂತಿಯ ಮೂಲಕ ಹರಿಯುವ ನೀರಿಗೆ ಸಂಪರ್ಕ ನೀಡಿದ ಆರೋಪದ ಮೇಲೆ ಅಳದಂಗಡಿ ಸಮೀಪದ ಬಡಗಕಾರಂದೂರು ಗ್ರಾಮದ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.
ಮಳೆಗಾಲ ಆರಂಭವಾದ ಸಂದರ್ಭದಲ್ಲಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ರಾತ್ರಿ ಸಮಯದಲ್ಲಿ ಗದ್ದೆ, ಕಣಿವೆ, ಹಳ್ಳ, ತೊರೆಗಳಲ್ಲಿ ಮೀನು ಶಿಕಾರಿ ಮಾಡುವ ಪರಿಪಾಠ ಶತಮಾನಗಳಿಂದ ಬಳಕೆಯಲ್ಲಿದೆ. ಹೆಚ್ಚಿನವರು ಬಲೆ ಹಾಕಿ ಸುರಕ್ಷಿತವಾಗಿ ಮೀನು ಹಿಡಿದರೆ, ಈ ಸವೇರಾ ಪಿರೇರಾ ನೀರಿಗೆ ಕರೆಂಟ್ ಹಾಯಿಸಿ ಮೀನು ಹಿಡಿಯಲು ಹೊರಟಿದ್ದಾನೆ. ತನ್ನ ಪಂಪ್ ಶೆಡ್ ನಿಂದ ಅಕ್ರಮವಾಗಿ ವಿದ್ಯುತ್ ಕಳ್ಳತನ ಮಾಡಿ ತಂತಿಗಳ ಮೂಲಕ ಅದನ್ನು ಸಮೀಪದಲ್ಲೇ ಹರಿಯುವ ಹಳ್ಳದ ಹರಿಯುವ ನೀರಿಗೆ ಸಂಪರ್ಕ ನೀಡಿದ್ದಾನೆ. ಇದರ ಅರಿವು ಇಲ್ಲದ ಸ್ಥಳೀಯರು ಮೀನು ಶಿಕಾರಿಗೆ ಹೋಗಿದ್ದಾರೆ. ಅವರಲ್ಲಿ ಒಬ್ಬರು ಜಾನ್ ಡಿಸೋಜಾ ಎಂಬವರಿಗೆ ವಿದ್ಯುತ್ ಆಘಾತವಾಗಿದೆ. ಯಾವುದೇ ಪ್ರಾಣಪಾಯಗೊಂಡಿಲ್ಲ. ಘಟನೆ ಕಳೆದ ಜೂನ್ 13 ರಂದು ನಡೆದಿದೆ.
ವಿದ್ಯುತ್ ಆಘಾತಗೊಂಡಿರುವ ಬಗ್ಗೆ ಸ್ಥಳೀಯರು ಮೆಸ್ಕಾಂ ಲೈನ್ ಮೆನ್ ಅವರ ಗಮನಕ್ಕೆ ಗಾಳಿ ಮಳೆಗೆ ವಿದ್ಯುತ್ ತಂತಿ ಕಡಿತಗೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಲೈನ್ ಮೆನ್ ಅವರು ಹುಡುಕಾಡಿದಾಗ ಬಡಗಕಾರಂದೂರು ಗ್ರಾಮದ ದರ್ಖಾಸು ನಿವಾಸಿ ಸೆವೆರಾ ಪಿರೇರಾ ಎಂಬಾತ ತನ್ನ ಪಂಪ್ ಶೆಡ್ ನಿಂದ ವಿದ್ಯುತ್ ಕಳ್ಳತನ ಮಾಡಿ ತಂತಿಯ ಮೂಲಕ ಹಳ್ಳಕ್ಕೆ ಸಂಪರ್ಕ ನೀಡಿರುವುದು ಕಂಡು ಬಂದಿದೆ.
ಅವರು ತಕ್ಷಣ ಅಳದಂಗಡಿ ಮೆಸ್ಕಾಂ ಇಂಜಿನಿಯರ್ ಹಾಗೂ ಬೆಳ್ತಂಗಡಿ ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್ ಅವರ ಗಮನಕ್ಕೆ ತಂದಿದ್ದಾರೆ. ಬಳಿಕ ಶಿವಶಂಕರ್ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ವಿದ್ಯುತ್ ಕಳ್ಳತನ ಮಾಡಿ ಯಾವುದೋ ದುಷ್ಕೃತ್ಯ ನಡೆಸಲು ಸಂಚು ನಡೆಸಿದ್ದಾರೆ ಎಂದು ತಿಳಿದು ಈ ಬಗ್ಗೆ ಫೋಟೋ, ವಿಡಿಯೋ ಸಮೇತ ವೇಣೂರು ಪೋಲಿಸರಿಗೆ ಅಳದಂಗಡಿ ಮೆಸ್ಕಾಂ ಇಂಜಿನಿಯರ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ವೇಣೂರು ಪೋಲಿಸರು ಇಂದು ಬೆಳಗ್ಗೆ ಆತನ ಮನೆಗೆ ಧಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಈತನ ಮೇಲೆ ಈಗಾಗಲೇ ಹಲವು ಕ್ರಿಮಿನಲ್ ಕೇಸ್ ಗಳು ದಾಖಲಾಗಿದ್ದು, ಮೂರು ವರ್ಷಗಳ ಹಿಂದೆ ತನ್ನ ವೃದ್ದ ತಂದೆ ತಾಯಿಗೆ ಹಲ್ಲೆ ಮಾಡಿದ್ದಲ್ಲದೆ ಸ್ಥಳೀಯರ ಮೇಲೆ ಹಲ್ಲೆ ಸೇರಿದಂತೆ ಹಲವಾರು ಕೇಸ್ ಗಳು ಈತನ ಮೇಲಿದೆ. ಆತ ಮೀನು ಹಿಡಿಯಲು ವಿದ್ಯುತ್ ಹರಿಸಿದನ ಅಥವಾ ಯಾರನ್ನಾದರೂ ಕೊಲೆ ಮಾಡುವ ಉದ್ದೇಶ ಇತ್ತಾ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.