ಬಂಟ್ವಾಳ : ನಿರ್ಲಕ್ಷತನದಿಂದ ವಾಹನ ಚಾಲನೆ ಮಾಡಿ ಟೆಂಪೋ ವಾಹನ ಮಗುಚಿ ಬಿದ್ದು ನೀಲಮ್ಮ ಎಂಬವರಿಗೆ ಗಾಯಗಳಾದ ಘಟನೆ ಮಾ. 3ರಂದು ನಡೆದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಚಾಲಕ ಅಬ್ದುಲ್ ರಹಿಮಾನ್ ಚಿಕಿತ್ಸಾ ವೆಚ್ಚವನ್ನು ಭರಿಸುವ ಭರವಸೆಯನ್ನು ನೀಡಿದ್ದರೂ ಇದೀಗ ನಿರಾಕರಿಸಿ ವಿಳಂಬಗೊಳಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಅಡ್ಡೂರು ಗ್ರಾಮದ ಕಳಸಗಿರಿ ಮನೆಯ ನೀಲಮ್ಮ ಎಂಬವರೇ ಕೂಲಿ ಕೆಲಸದ ನಿಮಿತ್ತ ಟೆಂಪೋದಲ್ಲಿ ಮುಲ್ಲರಪಟ್ನಕ್ಕೆ ಹೋಗಿದ್ದು, ಕೆಲಸ ಮುಗಿಸಿ ಮನೆಗೆ ವಾಪಾಸಾಗುವ ವೇಳೆಗೆ ಸರಿಸುಮಾರು ಮಧ್ಯಾಹ್ನ 2.30ಗೆ ಬಂಟ್ವಾಳ ತಾಲೂಕು ಅರಳ ಗ್ರಾಮದ ನೆಲ್ಲಿಮಾರು ಎಂಬಲ್ಲಿಗೆ ತಲುಪಿದಾಗ ಚಾಲಕ ಅಬ್ದುಲ್ ರಹಿಮಾನ್ ಅವರ ನಿರ್ಲಕ್ಷ್ಯದಿಂದ ವಾಹನ ಮಗುಚಿ ಬಿದ್ದು ನೀಲಮ್ಮ ಅವರಿಗೆ ಗುದ್ದಿದ ಗಾಯಗಳಾಗಿತ್ತು.
ಬಿಸಿರೋಡ್ ಸೋಮಯಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಚಾಲಕ ಸ್ವತಃ ಚಿಕಿತ್ಸೆ ವೆಚ್ಚ ಭರಿಸುವ ಭರವಸೆ ಕೊಟ್ಟಿದ್ದರೂ ಈವರೆಗೂ ಇದನ್ನ ವಿಳಂಬಗೊಳಿಸಿದ್ದು ಮಾತ್ರವಲ್ಲದೇ ನಿರಾಕರಿಸಿರುವುದಾಗಿಯೂ ನೀಲಮ್ಮ ದೂರು ನೀಡಿರುತ್ತಾರೆ. ಈ ಕುರಿತಂತೆ ಬಂಟ್ವಾಳ ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.