ಬೆಂಗಳೂರು: ಲೋಕ ಕಲ್ಯಾಣಕ್ಕಾಗಿ ಮುಖ್ಯಮಂತ್ರಿಗಳು ಯಾಗ ನಡೆಸುತ್ತಿದ್ದರೆ, ಅತ್ತ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗಾಗಿಯೇ ಇಡೀ ರಾಜ್ಯಾದ್ಯಂತ ಬೆಂಬಲಿಗರು ಮತ್ತು ಮಠಾಧೀಶರು ಯಜ್ಞ ಮಾಡುತ್ತಿದ್ದಾರೆ. ಇಂತಹದ್ದೊಂದು ಅಪರೂಪ ಘಟನೆ ನಡೆಯುತ್ತಿರುವುದು ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಬಲವಾಗಿ ಕೇಳಿ ಬರುತ್ತಿರುವ ಹೊತ್ತಲೇ ಎಂಬುದು ವಿಶೇಷ.
ಹೌದು, ಇಂದು ನಗರದ ಕಾಚರಕನಹಳ್ಳಿಯ ಕೋದಂಡರಾಮ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಧನ್ವಂತರಿ ಯಾಗ ನಡೆಸುತ್ತಿದ್ದಾರೆ. ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಹಮ್ಮಿಕೊಂಡಿರುವ ಈ ಧನ್ವಂತರಿ ಯಾಗ ಧಾರ್ಮಿಕ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಮತ್ತು ನಿರ್ಮಾಲನಂದ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳು ಭಾಗಿಯಾಗಿದ್ದಾರೆ.
ಹೀಗಿರುವಾಗಲೇ ಇಡೀ ರಾಜ್ಯದ್ಯಂತ ಸಿಎಂ ಬಿ.ಎಸ್ ಯಡಿಯೂರಪ್ಪ ಹೆಸರಿನಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಸಿಎಂ ಸ್ಥಾನಕ್ಕೆ ಕುತ್ತು ಬಾರದಂತೆ ಕ್ಷೀರಾಭಿಷೇಕ, ಅಷ್ಟೋತ್ತರ, ಏಕರುದ್ರಾಭಿಷೇಕ, ರಾಜೋಪಚಾರ, ಸಂಕಲ್ಪ ಪೂಜೆ ಸಲ್ಲಿಸಲಾಗುತ್ತಿದೆ. ಯಡಿಯೂರು ಅರ್ಚಕರಾದ ರೇಣುಕಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಹಲವರು ಸಿಎಂಗಾಗಿ ಯಜ್ಞ ಹಮ್ಮಿಕೊಂಡಿದ್ದಾರೆ.
ಬಿಜೆಪಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎನ್ನುವ ಮೂಲಕ ರಾಜೀನಾಮೆ ನೀಡುವ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಮಹತ್ವ ಸುಳಿವು ನೀಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಬಿಎಸ್ವೈ, ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ನನ್ನ ಮೇಲೆ ನಂಬಿಕೆಯಿಟ್ಟು ಸಿಎಂ ಮಾಡಿದ್ದರು. ಈಗ ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಬದ್ಧವಾಗಿರುತ್ತೇನೆ ಎಂದಿದ್ದಾರೆ.
ಇನ್ನು, ನನ್ನ ಪರವಾಗಿ ಪ್ರತಿಭಟನೆ, ಹೋರಾಟ ಮಾಡುವುದು ಸರಿಯಲ್ಲ. ಇಡೀ ರಾಜ್ಯದಲ್ಲಿ ಯರಿಗೂ ಸಿಗದಷ್ಟು ಬೆಂಬಲ ನನಗೆ ಸಿಕ್ಕಿದೆ. ಹೈಕಮಾಂಡ್ನಿಂದ 25ನೇ ತಾರೀಕಿನಂದು ಸಂದೇಶ ಬರಲಿದೆ. ಅಲ್ಲಿಯತನಕ ಕಾಯುತ್ತೇನೆ. ರಾಷ್ಟ್ರೀಯ ನಾಯಕರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಜುಲೈ 26ನೇ ತಾರೀಕು ರಾಜೀನಾಮೆ ನೀಡುವ ಸುಳಿವು ಕೊಟ್ಟರು.
ಎಪ್ಪತ್ತೈದು ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಅವಕಾಶ ಇಲ್ಲ. ಆದರೂ ಪಕ್ಷದಲ್ಲಿ ಹೈಕಮಾಂಡ್ ನನಗೆ ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದರು.