ಯಡಿಯೂರಪ್ಪ ಸರಕಾರದಲ್ಲಿ ಹಿಂದು ಧಾರ್ಮಿಕ ದತ್ತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ.
ಸೋಮವಾರ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸರಕಾರಿ ಕಾರು ತ್ಯಜಿಸಿ ಬಾಡಿಗೆ ವಾಹನದಲ್ಲಿ ತೆರಳಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಯವಾಗಿ ನಿರಾಕರಿಸಿದ ನಿಕಟಪೂರ್ವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಯಡಿಯೂರಪ್ಪನವರು ರಾಜ್ಯದ ಬಡವರ ಬಂಧುವಾಗಿ ಆಡಳಿತ ನಡೆಸಿದ್ದರು ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಲೇ ಸಚಿವ ಸಂಪುಟವೂ ವಿಸರ್ಜನೆ ಆದಂತೆ. ಈ ಹಿನ್ನೆಲೆಯಲ್ಲಿ ಅವರು ಸಹಜವಾಗೇ ತಮ್ಮ ಸರಕಾರಿ ಕಾರನ್ನು ತೊರೆದಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಮುಂದಿನ ಬಾರಿಯ ಸಂಪುಟದ ಸಚಿವ ಸ್ಥಾನ ಸಿಗುತ್ತೋ ಅನ್ನುವುದು ಖಾತ್ರಿಯಿಲ್ಲ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀನಿವಾಸ ಪೂಜಾರಿ ಸರಕಾರಿ ಕಾರು ತೊರೆದ ಬೆಂಗಳೂರಿನಲ್ಲಿಯೇ ಉಳಿದಿದ್ದಾರೆ.