ಪುತ್ತೂರು: ಮುಂಡೂರು-ತಿಂಗಳಾಡಿ ಮುಖ್ಯರಸ್ತೆಯನ್ನು ಸಂಪರ್ಕಿಸುವ ಅಂಬಟ-ಬನೇರಿ-ಕಡ್ಯ ಮಣ್ಣಿನ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಸುಮಾರು 10-15ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು, ಬೇಸಿಗೆಯಲ್ಲಿ ಕಲ್ಲಿನಿಂದ ಕೂಡಿದ್ದು, ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿರುತ್ತದೆ. ಈ ಭಾಗದ ಮನೆಗಳಲ್ಲಿ ಮಕ್ಕಳು-ವಯಸ್ಕರಿದ್ದು, ಅನಾರೋಗ್ಯ ಅಥವಾ ತುರ್ತುಪರಿಸ್ತಿಯಂತಹ ಸಂದರ್ಭದಲ್ಲಿ ಅವರ ಮೂಲಭೂತ ಅಗತ್ಯಗಳಿಗಾಗಿ ತೆರಳಲೂ ಅತೀವ ಕಷ್ಟಪಡಬೇಕಾಗಿದೆ. ಈ ರಸ್ತೆಯು ನಡೆಯಲೂ ಕೂಡ ಯೋಗ್ಯವಿಲ್ಲದಷ್ಟು ಕೆಟ್ಟಿದ್ದು, ಭಾಗದ ಜನರಿಗೆ ಶಾಪವಾಗಿ ಪರಿಣಮಿಸಿದೆ.

ಈ ಭಾಗದ ಜನರು ರಸ್ತೆ ಸೌಲಭ್ಯ ಬಿಟ್ಟು ಇಲ್ಲಿಯವರೆಗೆ ಬೇರೇನನ್ನು ಆಶಿಸಿಲ್ಲ ಹಾಗೂ ವಿನಂತಿಸಿಲ್ಲ. ಈಗಾಗಲೇ ರಸ್ತೆ ಕಾಂಕ್ರಿಟೀಕರಣಕ್ಕಾಗಿ ಹಲವಾರು ವಿನಂತಿಗಳನ್ನು ಸಲ್ಲಿಸಿದ್ದು ಸಮಾಧಾನಕರ ಪ್ರತಿಕ್ರಿಯೆಗಳು ದೊರೆತಿಲ್ಲ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳಂತೂ ಇನ್ನೂ ಕೇವಲ ಭರವಸೆಗಳಾಗಿಯೇ ಉಳಿದಿವೆ.

ಈ ಮನವಿಯನ್ನು ಗಂಭೀರ ವಿಷಯವೆಂದು ಪರಿಗಣಿಸಿ ಹಾಗೂ ಪುರಸ್ಕರಿಸಿ ಸ್ವಾತಂತ್ರಾನಂತರ ಪಾಳುಬಿದ್ದಿರುವ ಮುಂಡೂರು-ಅಂಬಟ-ಬನೇರಿ-ಕಡ್ಯ ರಸ್ತೆಗೆ ಕಾಂಕ್ರಿಟೀಕರಣದ ಭಾಗ್ಯವನ್ನು ಕರುಣಿಸಿ ಎಂದು ಗ್ರಾಮಸ್ಥರು ವಿನಂತಿಸಿಕೊಂಡರು.
ದಿನನಿತ್ಯ ಬಳಕೆ ವಸ್ತುಗಳನ್ನು ತರಲು ನಾವು ಮುಂಡೂರಿಗೆ ತೆರಳಬೇಕಿದ್ದು, ದಿನನಿತ್ಯ ಮುಂಡೂರಿನಿಂದ ಮನೆಯವರೆಗೆ ಸಾಮಾಗ್ರಿಗಳನ್ನು ಎತ್ತಿಕೊಂಡೇ ಹೋಗಬೇಕಾಗಿದೆ. ರಿಕ್ಷಾ ಚಾಲಕರು ಕೂಡ ಇಲ್ಲಿಗೇ ಬರಲು ಒಪ್ಪಿಕೊಳ್ಳುವುದಿಲ್ಲ ಪಂಚಾಯತ್ ಸದಸ್ಯರು ಈ ಬಗ್ಗೆ ಯಾವುದೇ ಕ್ರಮ ಕೈ ಗೊಳ್ಳುತ್ತಿಲ್ಲ – ಗ್ರಾಮಸ್ಥರು
ಈ ಮುಂಚೆಯೇ ನಾವು ಪಂಚಾಯತ್ ಸದಸ್ಯರಿಗೆ ಮನವಿ ನೀಡಿದ್ದೇವೆ. ಈ ಭಾಗದವರು ಬೇರೆ ಯಾವುದೇ ವ್ಯವಸ್ಥೆಗಳ ಬಗ್ಗೆ ಕೇಳಿದವರಲ್ಲ, ನಾವು ಕೇಳುತ್ತಿರುವುದು ಒಂದೇ ನಮಗೆ ರಸ್ತೆಯನ್ನು ದುರಸ್ಥಿ ಮಾಡಿಕೊಡಿ ಎಂದು, ಚುನಾವಣೆ ಸಂದರ್ಭದಲ್ಲಿ ಗುಂಪು ಗುಂಪಾಗಿ ಬಂದು ಮತಯಾಚನೆ ಮಾಡ್ತಾರೆ ಆದರೇ, ಮಾರ್ಗದ ವಿಷಯದಲ್ಲಿ ಒಬ್ಬರೂ ಕೂಡಾ ಬರುವುದಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ನಾವು ಶಾಸಕರನ್ನು ತಲುಪಲು ಪ್ರಯತ್ನಿಸಿದ್ದು ಆದರೇ ಯಾರು ಕೂಡ ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ – ಗ್ರಾಮಸ್ಥರು
ಮತಯಾಚನೆಗೆ ಬರುವಾಗ ನಿಮಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಆಶ್ವಾಸನೆ ನೀಡಿ ಹೋಗುತ್ತಾರೆ. ಆ ಆಶ್ವಾಸನೆ ಆಶ್ವಾಸನೆಯಾಗಿಯೇ ಉಳಿದಿದೆ. ವರ್ಷಂಪ್ರತಿ ನಾವೇ ಶ್ರಮದಾನ ಮಾಡಿಕೊಳ್ಳುತ್ತಾ ಇರುತ್ತೇವೆ. ಆದರೇ ಈ ಸಲ ಈ ಪರಿಸ್ಥಿತಿಯಲ್ಲಿ ನಮಗೆ ಶ್ರಮದಾನ ಮಾಡಿದರೂ ಸಹ ಯಾವುದೇ ಉಪಯೋಗವಿಲ್ಲ, ಇದಕ್ಕೆ ಲೋಡ್ ಗಟ್ಟಲೆ ಹರಳು ಅಥವಾ ಜಲ್ಲಿ ಬೇಕಾಗಿದೆ. ಯಾರೂ ಹಾಕ್ತಾರೆ..? ಪಂಚಾಯತ್ ನವರು ಬರುವುದೇ ಇಲ್ಲ, ಹೇಳಿದಾಗ ಕೊರೊನಾದಿಂದಾಗಿ ಏನು ಇಲ್ಲ ಎಂದು ಹೇಳುತ್ತಾರೆ.

