ಬಂಟ್ವಾಳ: ಅತ್ತಿಗೆ ಜೊತೆ ತಮ್ಮನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಅಣ್ಣನೊಬ್ಬ ಆತನನ್ನು ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ಬೊಂಡಾಲ ಶಾಂತಿ ಗುಡ್ಡೆಯಲ್ಲಿ ಜು.7 ರ ಮುಂಜಾನೆ ನಡೆದಿದೆ. ಮೃತನನ್ನು ಬೊಂಡಾಲ ಗುಡ್ಡೆ ಮನೆ ದಿ. ಕಿಟ್ಟ ನಾಯ್ಕ್ ರವರ ಮಗ ಸುಂದರ(30) ಎಂದು ಗುರುತಿಸಲಾಗಿದೆ.
ತಮ್ಮನಾದ ಸುಂದರನು ಅವಿವಾಹಿತನಾಗಿದ್ದು, ಮನೆಯ ಪಕ್ಕದಲ್ಲಿರುವ ಮೂಲ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ, ಹಿರಿಯ ಅಣ್ಣನ ಪತ್ನಿ ಜಯಂತಿಯು ಆತನಿಗೆ ಊಟ-ತಿಂಡಿಯನ್ನು ನೀಡುತ್ತಿದ್ದರು. ಈ ಮಧ್ಯೆ ಅತ್ತಿಗೆ ಜಯಂತಿ ಹಾಗೂ ತಮ್ಮ ಸುಂದರನಿಗೂ ಅನೈತಿಕ ಸಂಬಂಧ ಇತ್ತು ಎಂಬ ವಿಚಾರದಲ್ಲಿ ರವಿ ಹಾಗೂ ಸುಂದರ ರವರ ಮಧ್ಯೆ ಬಾಯಿ ಮಾತಿನ ಜಗಳವಾಗುತ್ತಿತ್ತು.
ಆದರೇ ನಿನ್ನೆ ಮನೆಯಲ್ಲಿ ತಾಯಿಯ ವರ್ಷಾಂತಿಕ ಇದ್ದ ಕಾರಣ ಇನ್ನೊಬ್ಬ ಅಣ್ಣ ರಮೇಶ ಮನೆಯಲ್ಲಿಯೇ ಇದ್ದರು, ಹೆಚ್ಚಿನ ದಿನ ಸುಂದರ ಮತ್ತು ರವಿ ನಡುವೆ ಗಲಾಟೆಯಾಗುತ್ತಿದ್ದು, ನಿನ್ನೆ ರಾತ್ರಿ ಊಟ ಮಾಡಿ ಮನೆಯಲ್ಲಿರುವ ಸಮಯ ಅಣ್ಣ ರವಿ ಮತ್ತು ತಮ್ಮ ಸುಂದರನಿಗೆ ಮೂಲ ಮನೆಯ ಒಳಗೆ ಗಲಾಟೆಯಾಗುವುದು ಕೇಳಿತ್ತು. ಸ್ವಲ್ಪ ಹೊತ್ತಿನ ಬಳಿಕ ಸುಂದರನು ಜೋರಾಗಿ ಬೊಬ್ಬೆ ಹಾಕುವುದು ಕೇಳಿ ಕೊಡಲೇ ರಮೇಶ ಮೂಲ ಮನೆಯ ಕಡೆಗೆ ಓಡಿ ಹೋಗಿ ನೋಡಿದಾಗ ಅಣ್ಣ ರವಿಯು ಸುಂದರನಿಗೆ ಅಡಿಕೆ ಸಲಾಕೆಯಿಂದ ತಲೆಗೆ ಒಡೆಯುತ್ತಿದ್ದು, ಸುಂದರ ನೆಲಕ್ಕೆ ಕುಸಿದು ಬಿದ್ದು ನರಳಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆ ಸಮಯಕ್ಕೆ ಅವರ ಇನ್ನೊಂದು ಅಣ್ಣ ಸುರೇಶ ಮತ್ತು ಅವರ ಹೆಂಡತಿ ಕೂಡ ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಸುಂದರನ್ನು ಆರೈಕೆ ಮಾಡುತ್ತಿದ್ದಂತೆ ಸುಂದರ ಮೃತ ಪಟ್ಟಿದ್ದಾನೆ. ಆರೋಪಿ ರವಿ ಆ ಸಮಯದಲ್ಲಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಆರೋಪಿ ರವಿ ಯ ಅಣ್ಣ ರಮೇಶ ಬಂಟ್ವಾಳ ಠಾಣೆಯಲ್ಲಿ ದೂರು ನೀಡಿದ್ದು, ಕಲಂ: 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.