ವಿಟ್ಲ: ಕೊಳ್ನಾಡು ಪಂಚಾಯತ್ ವ್ಯಾಪ್ತಿಯ ಮಂಕುಡೆ ಸರಕಾರಿ ಶಾಲೆಯಲ್ಲಿ ಇಂದು ವ್ಯಾಕ್ಸಿನ್ ನೀಡಲಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಸಾರ್ವಜನಿಕರು ಬೆಳಗ್ಗೆಯೇ ಕೇಂದ್ರದಲ್ಲಿ ಗುಂಪು ಗುಂಪಾಗಿ ಜಮಾಯಿಸಿದ್ದರು. ಆದರೆ ಸಾಲಿನಲ್ಲಿ ನಿಂತವರಿಗೆ ವ್ಯಾಕ್ಸಿನ್ ನೀಡುವ ಬದಲು ಸ್ಥಳೀಯ ಪಂ.ಸದಸ್ಯ ಹರೀಶ್ ಮಂಕುಡೆ ಎಂಬವರು ರೆಡಿಮಾಡಿದ್ದ ತನ್ನದೇ ಪಟ್ಟಿಯಂತೆ ವ್ಯಾಕ್ಸಿನ್ ಕೊಡಿಸಲು ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ವ್ಯಾಕ್ಸಿನ್ ಅವ್ಯವಹಾರದಲ್ಲಿ ಕೇಂದ್ರದಲ್ಲಿದ್ದ ಆಶಾ ಕಾರ್ಯಕರ್ತೆ ಮತ್ತು ಆರೋಗ್ಯ ಸಿಬ್ಬಂದಿಗಳು ಸಾಥ್ ನೀಡಿದ್ದಾರೆಂಬುದು ಸ್ಥಳೀಯ ಮಾಜಿ ಪಂ.ಸದಸ್ಯ ಪವಿತ್ರ ಪೂಂಜ ಕೊಡಂಗೆಯವರ ಆರೋಪವಾಗಿದೆ. ಇದೇ ವಿಚಾರವಾಗಿ ಪಂ.ಸದಸ್ಯ ಹರೀಶ್ ಮಂಕುಡೆ, ಆಶಾ ಕಾರ್ಯಕರ್ತೆ ಮತ್ತು ಆರೋಗ್ಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದ ಪವಿತ್ರ ಪೂಂಜ ಮತ್ತು ಕೆಲ ಸ್ಥಳೀಯರು ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಸದಸ್ಯ ಹರೀಶ್ ಮಂಕುಡೆ ಮೊದಲೇ ರೆಡಿ ಮಾಡಿದ್ದ ವ್ಯಾಕ್ಸಿನ್ ಫಲಾನುಭವಿಗಳ ಹೆಸರುಳ್ಳ ಪಟ್ಟಿಯನ್ನು ಕೈಬಿಟ್ಟು ಸಾಲಲ್ಲಿ ನಿಂತವರಿಗೆ ಸರಕಾರದ ನಿಯಮದಂತೆ ವ್ಯಾಕ್ಸಿನ್ ಕೊಡಬೇಕೆಂದು ಒತ್ತಾಯಿಸಿದರು. ಕೆಲದಿನಗಳ ಹಿಂದೆ ಇದೇ ರೀತಿಯ ಗೊಂದಲ ವಿಟ್ಲ ಪಡ್ನೂರು ಪಂ.ನಲ್ಲೂ ನಡೆದಿದ್ದು ಈ ಬಗ್ಗೆ ಅಲ್ಲಿನ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಕುಂಞ್ಞ ಎಂಬವರು ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದರು.
ವ್ಯಾಕ್ಸಿನ್ ಶಿಬಿರದ ಅವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಕೊಳ್ನಾಡು ಪಂ. ಪಿಡಿಒ ಮತ್ತು ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಆರೋಗ್ಯ ಇಲಾಖೆಯ ನಿರ್ದೇಶನದಂತೆ ವ್ಯಾಕ್ಸಿನ್ ಶಿಬಿರ ನಡೆಸಬೇಕೇ ಹೊರತು ಯಾವುದೇ ವ್ಯಕ್ತಿಯ ಹಿಡಿತದಲ್ಲಿ, ಆಜ್ಞೆಯಂತೆ ನಡೆಸಬೇಡಿ ಎಂದು ಸಿಬ್ಬಂದಿಗಳಿಗೆ ಆದೇಶಿಸಿದರು.
ಪಂಚಾಯತ್ ಉಪಾಧ್ಯಕ್ಷರ ಪ್ರತಿಕ್ರಿಯೆ
ವ್ಯಾಕ್ಸಿನ್ ಶಿಬಿರದ ಅವ್ಯವಸ್ಥೆ, ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಸರಕಾರವು ಕೋವಿಡ್ ನಿರ್ಮೂಲನೆಗಾಗಿ ಪ್ರತೀ ಗ್ರಾಮ ಪಂ.ಗಳಲ್ಲಿ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಿದೆ. ವ್ಯಾಕ್ಸಿನ್ ಶಿಬಿರ ಏರ್ಪಾಡು ಮಾಡುವ ಮತ್ತು ವ್ಯವಸ್ಥೆ ಬಗ್ಗೆ ಟಾಸ್ಕ್ ಫೋರ್ಸ್ ತಂಡಕ್ಕೆ ಯಾವುದೇ ಮಾಹಿತಿ ನೀಡದೇ ರಾಜಕೀಯ ಮಾಡ್ತಿದ್ದಾರೆ.
ತಮ್ಮ ಗ್ರಾಮದಲ್ಲಿ ಶಿಬಿರ ನಡೆಸಬೇಕೆಂದು ನಾವು ಒತ್ತಾಯ ಮಾಡಿದ್ದರೂ ವ್ಯಾಕ್ಸಿನ್ ಶಿಬಿರ ನಡೆಸುವಂತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರವೇ ವ್ಯಾಕ್ಸಿನ್ ನೀಡುವುದೆಂದು ಹೇಳಿದ್ದಾರೆ. ಆದರೆ ನಮ್ಮ ಟಾಸ್ಕ್ ಫೋರ್ಸ್ ತಂಡಕ್ಕೆ ಮಾಹಿತಿ ನೀಡದೇ ರಾಜಕೀಯ ಒತ್ತಡಗಳಿಗೆ ಮಣಿದ ಆರೋಗ್ಯ ಇಲಾಖೆ ಬೇಕಾಬಿಟ್ಟಿ ವ್ಯಾಕ್ಸಿನ್ ಶಿಬಿರ ಮಾಡುವ ಮೂಲಕ ಜನರಲ್ಲಿ ಗೊಂದಲ ಹುಟ್ಟುಹಾಕಿದೆ ಎಂದು ಆರೋಪಿಸಿದರು.
ಇನ್ನಾದರೂ ಸರಕಾರದ ಸುತ್ತೋಲೆಯಂತೆ ಆರೋಗ್ಯ ಇಲಾಖೆ ವ್ಯಾಕ್ಸಿನ್ ಶಿಬಿರ ನಡೆಸುವ ಮೂಲಕ ಕೊರೊನಾ ಮಹಾಮಾರಿಯನ್ನು ನಿರ್ಮೂಲನೆ ಮಾಡಲು ನಮ್ಮೊಂದಿಗೆ ಸಹಕರಿಸಬೇಕೆಂದು ಸುಭಾಶ್ಚಂದ್ರ ಶೆಟ್ಟಿ ಒತ್ತಾಯಿಸಿದರು.